ನ್ಯೂಸ್

ಎರಡನೇ ತಂಡದಲ್ಲಿ ಬರಲಿವೆ 3 ಹೊಸ ಆನೆಗಳು

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಗಜಪಡೆಯ ಮೊದಲ ತಂಡ ಸೋಮವಾರ ಮೈಸೂರಿಗೆ ಆಗಮಿಸಿದ್ದು, ಎರಡನೇ ತಂಡದಲ್ಲಿ ಮತ್ತೆ ಐದು ಆನೆಗಳು ಬರಲಿವೆ. ವಿಶೇಷ ಎಂದರೆ ಈ ತಂಡದಲ್ಲಿ ಮೂರು ಹೊಸ ಆನೆಗಳನ್ನು ಕರೆತರಲಾಗುತ್ತಿದೆ.

ಈ ಬಾರಿಯ ದಸರಾ ಉತ್ಸವದಲ್ಲಿ ಮೊದಲ ಬಾರಿಗೆ ಅಜಾನುಬಾಹು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆನೆಯೂ ಭಾಗವಹಿಸುತ್ತಿದೆ. ಮೈಸೂರು ರಾಜವಂಶ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2013ರಲ್ಲಿ ನಿಧನರಾದ ಬಳಿಕ ಅವರ ನೆನಪಿಗೆ 2014ರಲ್ಲಿ ಶನಿವಾರಸಂತೆ ಅರಣ್ಯ ಭಾಗದಲ್ಲಿ ಸೆರೆ ಹಿಡಿದಿದ್ದ ನಾಲ್ಕು ಆನೆಗಳ ಪೈಕಿ ಅಜಾನುಬಾಹು ಆನೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿತ್ತು.

ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ಶಾಂತ ಸ್ವಭಾವದ 56 ವರ್ಷದ ಈ ಆನೆ 2.86 ಮೀಟರ್ ಎತ್ತರ, 3.25 ಮೀಟರ್ ಉದ್ದ, 5500 ತೂಕ ಹೊಂದಿದ್ದು, ಅರ್ಜುನನಂತೆ ಭಾರಿ ಮೈಕಟ್ಟು ಹೊಂದಿದೆ. ಈತ ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದ್ದಾನೆ. ಅದರಲ್ಲೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಮುನ್ನುಗ್ಗುವ ಧೈರ್ಯಶಾಲಿಯೂ ಆಗಿದ್ದಾನೆ. ಶ್ರೀಕಂಠದತ್ತ ಆನೆಗೆ ಮಾವುತರಾಗಿ ರಾಧಾಕೃಷ್ಣ ಮತ್ತು ಓಂಕಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಕಂಠನ ಜತೆಗೆ 44 ವರ್ಷದ ರೂಪಾ, 11 ವರ್ಷದ ಹೇಮಾವತಿ ಆನೆಯನ್ನು ಕರೆತರಲಾಗುತ್ತಿದೆ. ಒಟ್ಟಾರೆ ದುಬಾರೆ ಶಿಬಿರದ ಸುಗ್ರೀವ (43), ಗೋಪಿ (42), ಮತ್ತಿಗೋಡು ಶಿಬಿರದ ಶ್ರೀಕಂಠದತ್ತ (56), ರೂಪಾ (44), ಹೇಮಾವತಿ (11) ಆನೆಗಳು ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಲಿವೆ.