ನ್ಯೂಸ್

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ವಿದೇಶಿ ನೇರ ಬಂಡವಾಳ‌ ಹೂಡಿಕೆ ಹುನ್ನಾರ: ಪ್ರಜ್ವಲ್ ರೇವಣ್ಣ ಕಿಡಿ

ಅರಕಲಗೂಡು: ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ಸಲುವಾಗಿ ವಿದೇಶಿ ನೇರ ಹೂಡಿಕೆ ನೀತಿ ಜಾರಿಗೊಳಿಸಿ ಕೇಂದ್ರ ಸರ್ಕಾರ ಬೆಳೆಗಾರರನ್ನು ದಿಕ್ಕು ತಪ್ಪಿಸಿ ವಂಚಿಸುವ ಹುನ್ನಾರ ನಡೆಸಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಆರೋಪಿಸಿದರು.

ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಬೇಲ್ ಗಳಿಗೆ ಪೂಜೆ ಸಲ್ಲಿಸಿ ಇಂದು ಪ್ರಸಕ್ತ ಸಾಲಿನ ಹೊಗೆಸೊಪ್ಪು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ, ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರು ಮಾರಾಟ ಮಾಡಿದ ಉತ್ಪನ್ನಗಳ ಹಣ ಇದೀಗ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ.‌ಆದರೆ, ವಿದೇಶಿ ನೇರ ಹೂಡಿಕೆ (ಎಫ್ ಐಡಿ) ನೀತಿ ಜಾರಿಯಾದರೆ ಹೊರ ದೇಶಗಳ ಬಂಡವಾಳ ಶಾಹಿಗಳ ಹಿಡಿತಕ್ಕೆ ಸಿಲುಕಿ ರೈತರು ಹಣಕ್ಕಾಗಿ ಅಲೆದಾಡುವ ಸ್ಥಿತಿ ತಲೆದೋರಲಿದೆ.

ಕೇಂದ್ರ ಸರ್ಕಾರ ರೈತರನ್ನು ದಾರಿ ತಪ್ಪಿಸಲು ಹೊರಟಿದೆ ಎಂದು‌‌ ಆಕ್ರೋಶ ವ್ಯಕ್ಯಪಡಿಸಿದರು. ಕೇಂದ್ರ‌ ಸರ್ಕಾರ ರೈತರ ಪರ ನಿಲ್ಲುತ್ತಿಲ್ಲ, ಹೊಗೆಸೊಪ್ಪು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಿಂದ ಆಯ್ಕೆಯಾದ ೨೫ ಸಂಸದರು ಕೇಂದ್ರದಲ್ಲಿ ರಾಜ್ಯದ ರೈತರ ಪರ ಧ್ವನಿ‌ ಎತ್ತುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ಕುಮಾರಸ್ವಾಮಿ ೨ ಲಕ್ಷ ರೂ. ರೈತರ ಸಾಲ ಮನ್ನಾ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ‌ ೨ ಸಾವಿರ ಹಣಕ್ಕಾಗಿ‌ ರೈತರು ಬ್ಯಾಂಕ್ ಬಳಿ ಭಿಕ್ಷುಕರಂತೆ ನಿಲ್ಲಬೇಕಾಗಿದೆ ಎಂದು ಛೇಡಿಸಿದರು.

ಹೊಗೆಸೊಪ್ಪು ಬೆಳೆಗಾರರ ಹಿತ ಕಾಯಬೇಕಿದ್ದ ಕೆಲ ರಾಜಕಾರಣಿಗಳು ಹೆಚ್ಚುವರಿ ಪರವಾನಗಿ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಮೋಸವೆಸಗುತಗತ್ತಿದ್ದಾರೆ. ಕನಿಷ್ಠ ಹೆಚ್ಚುವರಿ ಉತ್ಪಾದಿಸಿದ ತಂಬಾಕು ಕೊಳ್ಳಲು ವಿಧಿಸುತ್ತಿರುವ ದಂಡದ ಮೊತ್ತ ರದ್ದಪಡಿಸಲು ಸಾಧ್ಯವಾಗದೇ ಓಟಿನ ರಾಜಕಾರಣ ಮಾಡುತ್ತಿದ್ದಾರೆ. ನಾನು ಹಾಗಲ್ಲ, ಹೊಗೆಸೊಪ್ಪು ಮತ್ತು ಕಾಫಿ ಬೆಳೆಗಾರರ ಹಿತ ಕಾಯಲು ಕೇಂದ್ರದಲ್ಲಿ ರೈತರ ಪರ ಹೋರಾಟ ನಡೆಸುತ್ತೇನೆ.

ತಂಬಾಕು ದಂಡದ ಮೊತ್ತ ಕಡಿತಗೊಳಿಸಲು ಧ್ವನಿ ಎತ್ತುತ್ತೇನೆ. ವರ್ತಕರು ಮತ್ತು ಮಂಡಳಿ ಅಧಿಕಾರಿಗಳು ಹೊಗೆಸೊಪ್ಪಿಗೆ ಉತ್ತಮ ದರ ನೀಡುವ ಮುಖೇನ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಳಜಿ ತೋರಬೇಕು ಎಂದು ಮನವಿ ಮಾಡಿದರು. ಹರಾಜು ಅಧೀಕ್ಷಕರಾದ ಸಿದ್ದರಾಮು ಡಾಂಗೆ, ದೇವಾನಂದ, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಹೊಗೆಸೊಪ್ಪು ಬೆಳೆಗಾರರು ಇದ್ದರು.