ನ್ಯೂಸ್

ಎನ್‌ಸಿಬಿ ಬಲೆಗೆ ಬಿಗ್‌ಬಾಸ್ ಖ್ಯಾತಿಯ ಆಡಂ ಪಾಷಾ

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ಕನ್ನಡದ ‘ಬಿಗ್‌ಬಾಸ್’ ಸ್ಪರ್ಧಿಯಾಗಿದ್ದ ಆಡಂ ಪಾಷಾ(35)ನನ್ನು ಮಂಗಳವಾರ ಬಂಧಿಸಿದೆ.

ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಪೂರೈಕೆ ಆರೋಪದ ಮೇಲೆ ಬಂಧಿತ ಡಿ.ಅನಿಕಾ ಕೊಟ್ಟ ಮಾಹಿತಿ ಮೇರೆಗೆ ಪಾಷಾನನ್ನು ಬಂಧಿಸಲಾಗಿದೆ. ಎನ್‌ಡಿಪಿಎಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ನ.3ವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ರೂಪದರ್ಶಿಯೂ ಆಗಿರುವ ಆಡಂ ಬಾಲಿವುಡ್ ಸೇರಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ. ಕಳೆದ ಬಾರಿ ಕನ್ನಡದ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ. ತನ್ನ ವಿಚಿತ್ರ ಸ್ವಭಾವದಿಂದ ಹೆಸರು ಪಡೆದಿದ್ದ. ಕಿಂಗ್‌ಪಿನ್ ಅನಿಕಾ ಜತೆ 3 ವರ್ಷಗಳಿಂದ ಸಂಪರ್ಕ ಹೊಂದಿದ್ದ ಆಡಂ, ಡ್ರಗ್ಸ್ ಖರೀದಿಸಿದ್ದ. ಪೇಜ್-3 ಪಾರ್ಟಿಗಳಲ್ಲಿ ಭಾಗವಹಿಸಿದ್ದ.

ಪ್ರಮುಖವಾಗಿ ಅನಿಕಾಗೆ ಬೇರೆ ಬೇರೆ ವ್ಯಕ್ತಿಗಳನ್ನು ಪರಿಚಯ ಮಾಡಿಸಿ ಡ್ರಗ್ಸ್ ದಂಧೆಗೆ ಸಾಥ್ ಕೊಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಕರೆದು ವಿಚಾರಣೆ ನಡೆಸಿದಾಗ ಮೊದಲು ಆರೋಪವನ್ನು ತಳ್ಳಿ ಹಾಕಿದ್ದ. ಆನಂತರ ಆತನ ಬ್ಯಾಂಕ್ ಖಾತೆ ಮತ್ತು ಇ-ವ್ಯಾಟ್ ವಿವರ ಪಡೆದು ಪರಿಶೀಲನೆ ನಡೆಸಿದಾಗ ಅನಿಕಾ ಕಡೆಯಿಂದ ಹಣ ಸ್ವೀಕರಿಸಿರುವುದು ಬೆಳಕಿಗೆ ಬಂದಿತ್ತು. ಅದನ್ನು ಪ್ರಶ್ನೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

2 ತಿಂಗಳ ಹಿಂದೆ ಅನಿಕಾ ಮತ್ತು ಆಕೆ ಸಹಚರರ ಬಂಧನದ ವೇಳೆ ಆಡಂ ಪಾಷಾ ಹೆಸರು ಸಹ ಕೇಳಿ ಬಂದಿತ್ತು. ಆರೋಪಿ ಬಳಿ ಮಾದಕ ವಸ್ತು ಪತ್ತೆಯಾಗಿಲ್ಲ. ಅನಿಕಾ ನನಗೆ ಕಮ್ಮನಹಳ್ಳಿಯ ಕ್ಲಬ್‌ನಲ್ಲಿ 1 ವರ್ಷದ ಹಿಂದೆ ಡಾನ್ಸ್ ಮಾಡಲು ಹೋದಾಗ ಪರಿಚಯವಾಗಿದ್ದಳು. ತನ್ನನ್ನು ನಿಕ್ಕಿ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಡ್ರಗ್ಸ್ ದಂಧೆಯಲ್ಲಿ ಅನಿಕಾ ಭಾಗಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಸೆಲೆಬ್ರ್ರಿಟಿ ಜತೆಗೂ ನೋಡಿಲ್ಲ ಎಂದು ವಿಚಾರಣೆ ವೇಳೆ ಆಡಂ ಹೇಳಿದ್ದಾನೆ.