ನ್ಯೂಸ್

ಎನ್‌ಪಿಎ ಶೇ.1 ಮೀರದಂತೆ ಎಚ್ಚರವಹಿಸಿ: ಅಧಿಕಾರಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು

ಕೋಲಾರ: ಮಹಿಳೆಯರು, ರೈತರು ಡಿಸಿಸಿ ಬ್ಯಾಂಕಿನಿಂದ ಪಡೆದಿರುವ ಸಾಲದ ಕಂತು ಮತ್ತು ಬಡ್ಡಿ ಪಾವತಿಸದೆ ಹೋದಲ್ಲಿ ಉಂಟಾಗುವ ಆರ್ಥಿಕ ಹೊರೆ ಮತ್ತು ನಷ್ಟವನ್ನು ತಪ್ಪಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಾಕೀತು ಮಾಡಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅವಿಭಜಿತ ಜಿಲ್ಲೆಯ ಎಲ್ಲ ಶಾಖೆಗಳ ನೋಡಲ್ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿ, ಈ ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳಲು 13 ದಿನ ಬಾಕಿ ಇರುವುದರಿಂದ ಬ್ಯಾಂಕಿನ ಎಲ್ಲ ಶಾಖೆಗಳ ನೋಡಲ್ ಅಧಿಕಾರಿಗಳು ಶ್ರಮ ವಹಿಸಿ ಸಾಲ ವಸೂಲಿ ಮಾಡುವ ಮೂಲಕ ಎನ್‌ಪಿಎ ಪ್ರಮಾಣ ಶೇ.1 ಮೀರದಂತೆ ಎಚ್ಚರವಹಿಸಲು ಸೂಚಿಸಿದರು.

ಡಿಸಿಸಿ ಬ್ಯಾಂಕಿಗೆ ಬಡವರು, ಮಹಿಳೆಯರು ಜೀವಾಳ ಎಂಬುದನ್ನು ಕಳೆದ 8 ವರ್ಷಗಳಿಂದ ಉಚ್ಛರಿಸುತ್ತಿರುವೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ನನ್ನ ಆಶಯ ಅರ್ಥ ಮಾಡಿಕೊಂಡು ಕೆಲಸ ಮಾಡಿರುವುದರಿಂದ ಬ್ಯಾಂಕಿನ ಆರ್ಥಿಕ ಚಟುವಟಿಕೆ ಬಗ್ಗೆ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳಿಂದ ಅಪಸ್ವರ ತಪ್ಪಿದೆ. ಆದರೆ ಕೆಲವು ಅಧಿಕಾರಿಗಳಲ್ಲಿ ಇನ್ನೂ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಪ್ರವೃತ್ತಿ ಕಾಣುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸಾಲ ವಸೂಲಿಗೆ ಆಸಕ್ತಿ ತೋರದಿದ್ದರೆ ಮುಂದಾಗುವ ವ್ಯತ್ಯಾಸಗಳಿಗೆ ತಾವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾ.31ರೊಳಗೆ ಠೇವಣಿ ಸಂಗ್ರಹದೊಂದಿಗೆ ಬ್ಯಾಂಕಿನ ಎನ್‌ಪಿಎ ಶೇ.1 ಮೀರದಂತೆ ಪ್ಲಾನ್ ಮಾಡಿಕೊಂಡು ಗುರಿ ಸಾಧಿಸಿದಲ್ಲಿ ವಿಶೇಷವಾಗಿ ಸನ್ಮಾನಿಸುವೆ. ಒಂದು ವೇಳೆ ಉದಾಸೀನ ತೋರಿದಲ್ಲಿ ಕ್ರಮ ಜರುಗಿಸಲು ಹಿಂದು ಮುಂದೆ ನೋಡಲ್ಲ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲಕ್ಕೆ ಮೀಟರ್ ಬಡ್ಡಿ ಸಮೇತ ಪಾವತಿಸುವ ಮನಸ್ಥಿತಿ ಇರುವ ಕೆಲವೇ ಮಂದಿಗೆ ಶೂನ್ಯಬಡ್ಡಿಯ ಸಾಲ ಮರುಪಾವತಿಸಲು ಇರುವ ತೊಂದರೆ ಏನು ಎಂದು ಅಧಿಕಾರಿಗಳ ಬಾಯಿಂದ ಉತ್ತರ ಪಡೆಯಲು ಯತ್ನಿಸಿ, ಎರಡೂ ಜಿಲ್ಲೆಯಲ್ಲಿ 1300 ಕೋಟಿ ರೂ. ಸಾಲ ನೀಡಲಾಗಿದೆ. 42 ಕೋಟಿ ರೂ. ಸಾಲ ವಸೂಲಿಯಾಗಬೇಕಿದ್ದು, ಮಾ.31ರೊಳಗೆ ಶೇ.100 ಸಾಲ ವಸೂಲಿಯಾದಲ್ಲಿ ಎಸ್‌ಪಿಎ ಪ್ರಮಾಣವನ್ನು ಶೇ.1ಕ್ಕೆ ತರಲು ಸಾಧ್ಯವಾಗುತ್ತದೆ. ನೋಡಲ್ ಅಧಿಕಾರಿಗಳು ಸಕಾಲಕ್ಕೆ ಸಾಲ ಮರುಪಾವತಿಸದಿದ್ದರೆ, ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಬಿಡಿಗಾಸು ಸಾಲ ಸಿಗದು ಎಂದು ಬಿಸಿಮುಟ್ಟಿಸಿದರು.

ಠೇವಣಿ ಸಂಗ್ರಹಕ್ಕೆ ಸೂಚನೆ: ಡಿಸಿಸಿ ಬ್ಯಾಂಕ್ ತಾಂತ್ರಿಕತೆ ಅಳವಡಿಕೆ, ಸಾಲ ನೀಡಿಕೆ, ವಸೂಲಾತಿಯಲ್ಲಿ ದೇಶದಲ್ಲೇ ನಂ.1 ಆಗಿದೆ. ಇದರ ಜತೆಗೆ ಠೇವಣಿ ಸಂಗ್ರಹದಲ್ಲಿ ಸಾಧನೆ ಮಾಡಿದರೆ ನಮ್ಮ ಗೌರವ ರಾಷ್ಟ್ರಮಟ್ಟದಲ್ಲಿ ಹೆಚ್ಚಲಿದೆ. ಠೇವಣಿ ಸಂಗ್ರಹ ಹೆಚ್ಚಾದರೆ ಮಾತ್ರ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯನಂದ್, ಬ್ಯಾಂಕಿನ ಎಂಡಿ ಶಿವಕುಮಾರ್, ಅಧಿಕಾರಿಗಳಾದ ಬೈರೇಗೌಡ, ಹುಸೇನ್ ಸಾಬ್ ದೊಡ್ಡಮನಿ, ನಾಗೇಶ್, ಖಲೀಂವುಲ್ಲಾ, ಪದ್ಮಮ್ಮ ಇತರರಿದ್ದರು.