ಶಿವಮೊಗ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹತ್ತು ಹಲವು ಸವಾಲುಗಳಿಗೆ ನಮ್ಮನ್ನು ನಾವು ತೆರೆದುಕೊಂಡು ಕುವೆಂಪು ವಿವಿಯನ್ನು ಬಲಿಷ್ಠಗೊಳಿಸಬೇಕಿದೆ ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿವಿಯ ಶೈಕ್ಷಣಿಕ ಪ್ರಗತಿ ಕುರಿತ ಚಿಂತನ-ಮಂಥನದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಮೊದಲು ಎನ್‌ಇಪಿಯನ್ನು ಕರ್ನಾಟಕ ಅಳವಡಿಸಿಕೊಂಡಾಗ ವಿವಿಯು ಅದನ್ನು ಮುಂಚೂಣಿಯಲ್ಲಿ ನಿಂತು ಅನುಷ್ಠಾನಗೊಳಿಸಿದ್ದು ಹೆಮ್ಮೆಯ ವಿಷಯ ಎಂದರು.
ಎಲ್ಲ ಸಿಬ್ಬಂದಿಯು ಅವರದೇ ಆದ ಅಧ್ಯಯನ, ಸಂಶೋಧನಾ ಸಾಮರ್ಥ್ಯ, ವಿಶೇಷ ಪ್ರತಿಭೆ, ಸೃಜನಾತ್ಮಕತೆಯಿಂದ ಕಾರ್ಯನಿರ್ವಹಿಸಿದ್ದರಿಂದ ವಿವಿಯು ರಾಜ್ಯ, ರಾಷ್ಟ್ರಮಟ್ಟದ ಕೆಎಸ್‌ಯುಆರ್‌ಎಫ್, ಎನ್‌ಐಆರ್‌ಎಫ್ ರ‌್ಯಾಂಕ್‌ಗಳಲ್ಲಿ 100ರ ಒಳಗಿನ ಉತ್ತಮ ಸ್ಥಾನ ಪಡೆಯುತ್ತಿದೆ. ವಿವಿಯಲ್ಲಿನ ಅಧ್ಯಯನ ಗುಣಮಟ್ಟ ವೃದ್ಧಿಸಲು ಎಲ್ಲ ವಿಭಾಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಶೋಧನೆಗಾಗಿ ಹೊಸ ಉಪಕರಣಗಳು ಮತ್ತು ಕಂಪ್ಯೂಟರ್ ತರಿಸಲಾಗಿದೆ. ರಾಜ್ಯದ ಮೊದಲ ತಂಬಾಕು ಮುಕ್ತ ವಿವಿಯಾಗಿ ಬೆಳೆದಿದೆ. ಅಧ್ಯಾಪಕೇತರ ನೌಕರರ ಬಹುದಿನಗಳ ಬೇಡಿಕೆಯಾದ ಬಡ್ತಿ ನೀಡಲಾಗಿದೆ ಹಾಗೂ ಎರಡೆರಡು ಘಟಿಕೋತ್ಸವಗಳನ್ನು ಯಶಸ್ವಿಯಾಗಿ ಒಟ್ಟಿಗೆ ನಡೆಸಲಾಗಿದೆ ಎಂದು ಹೇಳಿದರು.
ಕುಲಸಚಿವೆ ಜಿ.ಅನುರಾಧಾ, ವಿವಿಯ ಸಿಂಡಿಕೇಟ್ ಸದಸ್ಯ ರಮೇಶ್‌ಬಾಬು ಮಾತನಾಡಿದರು. ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಡಾ. ಜಿ.ಪ್ರಶಾಂತ್‌ನಾಯ್ಕ್, ವಿವಿ ಸಿಂಡಿಕೇಟ್ ಸದಸ್ಯರಾದ ಬಳ್ಳಕೆರೆ ಸಂತೋಷ್, ರಾಮಲಿಂಗಪ್ಪ, ವಿವಿ ಡಾ. ಯೋಗೀಶ್, ಡಾ. ರಾಮಚಂದ್ರ, ಶ್ರೀನಿವಾಸ್ ಇದ್ದರು.