ತಿ.ನರಸೀಪುರ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ, ಸಹಬಾಳ್ವೆ, ಸಂಘಟನೆ, ಶ್ರಮದಾನ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದರ ಜತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.
ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಮೈಸೂರಿನ ಯುವರಾಜ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಗ್ರಾಮಾಭಿವೃದ್ಧಿ ಪರಿಕಲ್ಪನೆಯನ್ನು ರೂಢಿಸಿಕೊಂಡು ಸ್ವಚ್ಛ ಮತ್ತು ಸುಂದರ ಗ್ರಾಮಗಳನ್ನಾಗಿ ಪರಿವರ್ತಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಮಾಜ ಸೇವಾ ಮನೋಭಾವ ಅತ್ಯಗತ್ಯವಿದ್ದು, ಪ್ರತಿಯೊಬ್ಬರೂ ಶಿಕ್ಷಣದ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದರು.
ಮಹಾರಾಜ ಕಾಲೇಜಿನ ಎನ್‌ಎಸ್‌ಎಸ್ ತಂಡ ಗ್ರಾಮೀಣ ಭಾಗಗಳ ಸಮಸ್ಯೆಗಳನ್ನು ಅರಿತು ಗ್ರಾಮಗಳ ಅಭಿವೃದ್ಧಿಗೆ ಸೇವಾ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಮುಖಂಡ ದಯಾನಂದ ಪಟೇಲ್ ಮಾತನಾಡಿ, ರಾಷ್ಟ್ರೀಯ ಸೇವಾ ಕನಸು ಹೊತ್ತಂತಹ ಗಾಂಧೀಜಿ ಅವರ ಕನಸಿನ ದ್ಯೂತಕವಾಗಿ 1959ರಲ್ಲಿ ಸಿ.ಡಿ.ದೇಶ್ ಮುಖ್ ಸಮಿತಿ ರಚನೆ ಮಾಡಲಾಯಿತು. 1967ರಲ್ಲಿ ರಾಜ್ಯ ಶಿಕ್ಷಣ ಮಂತ್ರಿಗಳ ಸಭೆ ಹಾಗೂ ವಿದ್ಯಾರ್ಥಿಗಳ ಸಮಾವೇಶ ನಡೆಸಿ ನಂತರ ರಾಷ್ಟ್ರೀಯ ಸೇವಾ ಸಮಿತಿ ರಚಿಸಲಾಯಿತು. ಈ ಯೋಜನೆ ಏಕಾಏಕಿ ಅಸ್ತಿತ್ವಕ್ಕೆ ಬಂದದ್ದಲ್ಲ ಎಂದ ಅವರು, ಸಂಸ್ಥೆಯ ಸದಸ್ಯರಾಗುವುದೇ ಒಂದು ಹೆಮ್ಮೆಯ ವಿಷಯ ಎಂದರು.
ಜಿಪಂ ಮಾಜಿ ಸದಸ್ಯ ಜಯಪಾಲ್ ಭರಣಿ, ಗ್ರಾಪಂ ಅಧ್ಯಕ್ಷೆ ಅರ್ಚನಾ ಸಂದೀಪ್, ಮಾಜಿ ಅಧ್ಯಕ್ಷ ಎಸ್.ಎಂ.ಪುಟ್ಟಸ್ವಾಮಿ, ಅಶೋಕ್, ಎನ್.ಮಹದೇವಯ್ಯ, ಮಾಜಿ ಉಪಾಧ್ಯಕ್ಷ ಸುರೇಶ್, ಮುಖಂಡರಾದ ಗಣೇಶ್‌ಸ್ವಾಮಿ, ಅಬ್ದುಲ್ ವಾಜಿದ್, ಚಿಕ್ಕನಾಯಕ, ಕುಮಾರಸ್ವಾಮಿ, ರಾಮಾನುಜಂ, ಜಗದೀಶ್, ಬಾಬು, ಸುಲೇಮಾನ್,ದೇಶಿ ಲಿಂಗಯ್ಯ, ಎಸ್.ಕಾಂತರಾಜು, ಪಿಡಿಒ ಸಂತೋಷ್‌ಕುಮಾರ್, ಕಾರ್ಯದರ್ಶಿ ಸುಧೀರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಗಿರೀಶ್ ಚಂದ್ರ, ಎಸ್.ಮಂಜುಳಾ, ಸಹ ಕಾರ್ಯಕ್ರಮಾಧಿಕಾರಿ ಡಾ.ಅನೀಲ್ ಕುಮಾರ್, ಸಮನ್ವಿತಾ ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.