ಶೃಂಗೇರಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ ವೃದ್ಧಿಯಾಗುವುದಲ್ಲದೆ ನಾಯಕತ್ವ ಗುಣ ಬೆಳೆಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ ಎಂದು ಜೆಸಿಬಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಎ.ಜಿ.ಪ್ರಶಾಂತ್ ಹೇಳಿದರು.
ವಿದ್ಯಾರಣ್ಯಪುರ ಗ್ರಾಪಂ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯಿಂದ ಏರ್ಪಡಿಸಿದ್ದ ಶಿಬಿರದಲ್ಲಿ ಮಾತನಾಡಿದರು.
ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಯೋಜನೆ ಮೂಲಕ ಸಮಾಜದ ಹಿತ ಕಾಪಾಡುವ ಕೆಲಸವನ್ನು ಸಾಮೂಹಿಕವಾಗಿ ನಡೆಸುವುದು ಶ್ಲಾಘನೀಯ ಎಂದರು.
ಉಪ ಪ್ರಾಚಾರ್ಯ ಶಶಿಧರ್ ಮಾತನಾಡಿ, ದೇವಸ್ಥಾನ ನಮ್ಮ ಶ್ರದ್ಧಾ ಕೇಂದ್ರವಾಗಿದ್ದು ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದರಿಂದ ಮನಸ್ಸಿಗೂ ನೆಮ್ಮದಿ ನೀಡುತ್ತದೆ ಎಂದು ಹೇಳಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲೆ ಸಮಿತಿ ಅಧ್ಯಕ್ಷ ಆನಂದಸ್ವಾಮಿ ಕಲ್ಕಟ್ಟೆ, ಸೀಮಾ, ವನಜಾಕ್ಷಿ, ವಿನೋದಕುಮಾರ್ ಇತರರಿದ್ದರು.