ಎನ್‌ಎಸ್‌ಎಸ್ ಶಿಬಿರಗಳಿಂದ ವ್ಯಕ್ತಿತ್ವ ವಿಕಸನ ಆಗುತ್ತದೆ. ಜತೆಗೆ ಸಹಬಾಳ್ವೆ, ಅನೋನ್ಯತೆ, ಸರಿಯಾದ ನಡವಳಿಕೆ ಕಲಿಯಬಹುದು ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ರೆಹಮಾನ್ ಹೇಳಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಮೈಸೂರು ತಾಲೂಕು ಸಾಹುಕಾರಹುಂಡಿಯಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ನಮ್ಮ ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿನಿಯರಿದ್ದು, ಈ ಪೈಕಿ ನೂರು ಜನರಿಗೆ ಮಾತ್ರ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವ ಹಾಗೂ ಈ ರೀತಿಯ ಗುಣಗಳನ್ನು ಕಲಿತು, ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಳ್ಳಿ. ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆ ರೀತಿ ಗ್ರಾಮಸ್ಥರ ಮನಗೆಲ್ಲುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸೇವಾ ಮನೋಭಾವ, ನಾಯಕತ್ವ ಗುಣ, ಗ್ರಾಮೀಣ ಪ್ರದೇಶಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಎನ್‌ಎಸ್‌ಎಸ್ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಗ್ರಾಪಂ ಮಾಜಿ ಸದಸ್ಯ ಬಿ.ರಮೇಶ್ ಮಾತನಾಡಿ, ಗ್ರಾಮದ ಚರಂಡಿಗಳ ಸ್ವಚ್ಥತಾ ಕಾರ್ಯದಲ್ಲಿ ಸ್ಥಳೀಯ ಆಡಳಿತದೊಂದಿಗೆ ಶಿಬಿರಾರ್ಥಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಮಾಜಿ ಸದಸ್ಯ ಡಿ.ಶ್ರೀರಾಂ ಮಾತನಾಡಿ, ಗ್ರಾಮಸ್ಥರೆಲ್ಲರೂ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದರು.
ಯುವ ಮುಖಂಡ ಪ್ರಜ್ವಲ್ ಮಾತನಾಡಿ, ತಮ್ಮ ಟ್ರಸ್ಟ್ ಮೂಲಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಮುಂದೆಯೂ ಮುಂದುವರೆಸಲು ಸಹಕರಿಸಿ ಎಂದು ಕೋರಿದರು.
ಕಾಲೇಜಿನ ಅಧ್ಯಾಪಕ ಕಾರ್ಯದರ್ಶಿ ಪ್ರೊ.ಜಿ.ಕೆ.ರವಿಶಂಕರ್, ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಪುರುಷೋತ್ತಮ್, ಸದಸ್ಯೆ ಸುನೀತಾ ಮಾದೇವ್, ಗ್ರಾಮದ ಮುಖಂಡರಾದ ಫಾರಂ ಶಿವಣ್ಣ, ಡಿ. ಪುಟ್ಟಸ್ವಾಮಿ, ದೊರೆಸ್ವಾಮಿ ನಾಯ್ಕ, ಹೊನ್ನೇಗೌಡ, ದೀಪು ಸಿದ್ದೇಗೌಡ, ಚೇತನ್ ಇತರರಿದ್ದರು.