ನ್ಯೂಸ್

ಎತ್ತರಿಸಿದ ಮೇಲ್ಸೇತುವೆ ಬದಲು ಪರ್ಯಾಯ ಮಾರ್ಗ ಸೂಕ್ತ

ಆರ್​​.ತುಳಸಿಕುಮಾರ್​​

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗಿಬರಲು ಬಳಸಲಾಗುತ್ತಿರುವ ಹಾಲಿ ಏರ್‌ಪೋರ್ಟ್ ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಪ್ರತ್ಯೇಕ ಎಲಿವೇಟೆಡ್ ಫ್ಲೈಓವರ್ (ಎತ್ತರಿಸಿದ ಮೇಲ್ಸೇತುವೆ) ನಿರ್ಮಿಸಬೇಕೆಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ. ಹೊಸದಾಗಿ ಎತ್ತರಿಸಿದ ಮೇಲ್ಸೇತುವೆ ನಿರ್ಮಿಸುವ ಬದಲು ಏರ್‌ಪೋರ್ಟ್ ಸಂಪರ್ಕಿಸಲು ಇನ್ನಿತರ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವುದು ಸೂಕ್ತ ಎಂಬುದಾಗಿ ಸಂಚಾರ ಪರಿಣಿತರು ಪರಿಹಾರ ಸೂತ್ರವನ್ನು ಮುಂದಿಟ್ಟಿದ್ದಾರೆ.

ಇತ್ತೀಚಿಗಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದಿಲ್ಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರು ಸುತ್ತಲಿನ ವಿವಿಧ ರಸ್ತೆ ಯೋಜನೆಗಳಿಗೆ ಅನುದಾನ ನೀಡಿಕೆ ಹಾಗೂ ಬಾಕಿಯಿರುವ ಒಪ್ಪಿಗೆ ನೀಡುವಂತೆ ಕೋರಿದ್ದರು. ಈ ವೇಳೆ ಅವರು ಏರ್‌ಪೋರ್ಟ್ ಸಂಪರ್ಕಿಸಲು ಹೆಬ್ಬಾಳ ಜಂಕ್ಷನ್‌ನಿಂದ ಕೆಐಎಗೆ ಪ್ರತ್ಯೇಕ ಎಲಿವೇಟೆಡ್ ಫ್ಲೈಓವರ್ ನಿರ್ಮಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಸದ್ಯ ಹೆಬ್ಬಾಳ ಜಂಕ್ಷನ್ ‘ಸಂಚಾರ ಸಿಕ್ಕು’ಗೆ ಕುಖ್ಯಾತಿ ಪಡೆದಿದ್ದು, ವಾಹನ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಹಾಲಿ ಕೈಗೊಂಡಿರುವ ಕಾಮಗಾರಿ ಪೂರ್ಣ ಪ್ರಮಾಣದ ಪರಿಹಾರ ನೀಡದು. ಇಂತಹ ಸ್ಥಿತಿಯಲ್ಲಿ ಮತ್ತೆ ಹೊಸದಾಗಿ ಬೃಹತ್ ಎಲಿವೇಟೆಡ್ ಫ್ಲೈಓವರ್ ನಿರ್ಮಿಸಿದರೆ ಅಧಿಕ ವಾಹನಗಳ ಓಡಾಟ ಹೆಚ್ಚಿ ಮತ್ತಷ್ಟು ಸಂಚಾರ ಸಮಸ್ಯೆ ಉಂಟು ಮಾಡುತ್ತದೆ. ಇದರಿಂದ ಏರ್‌ಪೋರ್ಟ್ ರಸ್ತೆ ಕಿಷ್ಕೆಂಧೆ ಆಗುವುದಲ್ಲದೆ ಭವಿಷ್ಯದಲ್ಲಿ ಸಂಚಾರಕ್ಕೆ ಸಂಚಕಾರ ತಂದೊಡ್ಡಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಸದ್ಯ ಏರ್‌ಪೋರ್ಟ್ ರಸ್ತೆ ಸಿಗ್ನಲ್‌ಮುಕ್ತ ಕಾರಿಡಾರ್ ಆಗಿದೆ. ಹೆಬ್ಬಾಳದಿಂದ ಸಾದಹಳ್ಳಿ ಟೋಲ್ ಗೇಟ್‌ವರೆಗೆ 6 ಪಥದ ರಸ್ತೆ ಜತೆಗೆ ಎರಡೂ ಕಡೆ ತಲಾ 2 ಪಥಗಳ ಸರ್ವಿಸ್ ರೋಡ್ ಸೌಲಭ್ಯ ಇದೆ. ಇದರೊಟ್ಟಿಗೆ ಕೊಡಿಗೇಹಳ್ಳಿ ಜಂಕ್ಷನ್‌ನಿಂದ ಅಳ್ಳಾಳಸಂದ್ರ ರೈಲ್ವೆ ಸೇತುವೆ ವರೆಗೆ (4.1 ಕಿ.ಮೀ. ಉದ್ದ) 6 ಪಥದ ಎಲಿವೇಟೆಡ್ ಮಾರ್ಗದ ಸೌಲಭ್ಯ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿದೆ. ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲದಿದ್ದರೂ, ಹೆಬ್ಬಾಳ ಜಂಕ್ಷನ್‌ನಲ್ಲಿ ಕೇವಲ 4 ಪಥಗಳ ರಸ್ತೆ ಇರುವುದರಿಂದ ಸಂಚಾರ ಸಿಕ್ಕು ಸೃಷ್ಟಿಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸದೆ ಸಿಗ್ನಲ್‌ಮುಕ್ತ ಕಾರಿಡಾರ್ ಮಾರ್ಗದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂಬ ವಾದವನ್ನು ಸಂಚಾರ ತಜ್ಞರು ಪ್ರತಿಪಾದಿಸಿದ್ದಾರೆ.

ಹೊಸ ಪ್ರಸ್ತಾಪ ಸಂಚಾರ ಸಿಕ್ಕುಗೆ ಆಹ್ವಾನ?:

ಪ್ರಸ್ತುತ ಸಿಗ್ನಲ್‌ಮುಕ್ತ ಕಾರಿಡಾರ್ ಮಾರ್ಗದ ಬದಿಯೇ ಏರ್‌ಪೋರ್ಟ್‌ಗೆ ಮೆಟ್ರೋ ರೈಲು ಸಂಪರ್ಕಿಸಲು ಕಾಮಗಾರಿ ನಡೆದಿದೆ. ಇದಲ್ಲದೆ ಯಲಹಂಕ ಮಾರ್ಗವಾಗಿ ದೇವನಹಳ್ಳಿ ಕಡೆಗೆ ರೈಲ್ವೆ ಇಲಾಖೆ ರೈಲು ಸಂಚಾರದ ಸೌಲಭ್ಯವಿದ್ದು, 2030ರ ವೇಳೆ ಹೊಸ ಟರ್ಮಿನಲ್ ಸ್ಥಾಪನೆಯಾಗಲಿದೆ. ಸಬರ್ಬನ್ ರೈಲು ಸಂಪರ್ಕಿಸುವ ಕಾಮಗಾರಿಯೂ ಆರಂಭಿಕ ಹಂತದಲ್ಲಿದೆ. ಈ ಯೋಜನೆಗಳಲ್ಲದೆ ಏರ್‌ಪೋರ್ಟ್‌ಗೆ ಹೊಂದಿಕೊಂಡಿರುವ ಕೆಲ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಯೋಜನೆಗಳು ಇನ್ನೆರಡು ವರ್ಷದಲ್ಲಿ ಪೂರ್ಣಗೊಂಡಲ್ಲಿ ಸಂಚಾರ ಸುಲಭವಾಗುವ ಜತೆಗೆ ವಾಹನಗಳ ಓಡಾಟ ಹೆಚ್ಚುವುದು ನಿಶ್ಚಿತ. ಮುಖ್ಯವಾಗಿ ಏರ್‌ಪೋರ್ಟ್ ರಸ್ತೆಯ ಸರ್ವಿಸ್ ರಸ್ತೆ ಮಧ್ಯೆಯೇ ಮೆಟ್ರೋ ಮಾರ್ಗ ಹಾದುಹೋಗಿರುವ ಕಾರಣ ರಸ್ತೆಯ ಮುಖ್ಯ ಕ್ಯಾರೇಜ್ ತೆರವುಗೊಳಿಸಿ ಹೊಸದಾಗಿ ಎತ್ತರಿಸಿದ ಮಾರ್ಗ ನಿರ್ಮಿಸುವುದು ಹೆಚ್ಚಿನ ಹಣ ಹಾಗೂ ಸಮಯ ವ್ಯಯ ಆಗಲಿದೆ. ಒಂದು ವೇಳೆ ಕಾಮಗಾರಿ ಕೈಗೊಂಡರೂ, ಬೆಂಗಳೂರಿಗೆ 2ನೇ ಏರ್‌ಪೋರ್ಟ್ ಆರಂಭವಾದಲ್ಲಿ ಎಲಿವೇಟೆಡ್ ಮಾರ್ಗ ನಿರ್ಮಾಣ ದುಂದುವೆಚ್ಚಕ್ಕೆ ದಾರಿಮಾಡಿಕೊಡುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗಕ್ಕೆ ಏಕಿಲ್ಲ ಆದ್ಯತೆ:

ಕೆಐಎ ಆರಂಭವಾದ ಬಳಿಕ ಹಾಲಿ ಏರ್‌ಪೋರ್ಟ್ ರಸ್ತೆಯಲ್ಲಿ (ಬಳ್ಳಾರಿ ರಸ್ತೆ) ಸಂಚಾರ ದಟ್ಟಣೆ ನಿವಾರಿಸಲು ರಿಂಗ್ ರಸ್ತೆಯ ಹೆಣ್ಣೂರು-ಕಣ್ಣೂರು-ಬಾಗಲೂರು-ಮೈಲಪ್ಪನಹಳ್ಳಿ-ಬೇಗೂರು ಮಾರ್ಗವಾಗಿ 4 ಪಥಗಳ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯೀಗ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ. ರಾತ್ರಿ ವೇಳೆ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಇದರ ಜತೆಗೆ ಇನ್ನೊಂದು ಪರ್ಯಾರ್ಯ ಮಾರ್ಗವು ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ-ಹೆಗಡೆನಗರ-ರೇವಾ ಕಾಲೇಜ್ ಮೂಲಕ ಬಾಗಲೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯನ್ನು ಪಾಲಿಕೆ ವೈಟ್ ಟಾಪಿಂಗ್ ಮಾಡಿ ಮೇಲ್ದರ್ಜೆಗೇರಿಸಿದೆ. ಆದರೆ, ಹೆಣ್ಣೂರು ಮಾರ್ಗವನ್ನು ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಡಿಎಲ್ ನಿರ್ವಹಣೆಗೆ ಬೆನ್ನು ಮಾಡಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

2 ಎಲಿವೇಟೆಡ್ ರಸ್ತೆಗೆ ಪಾಲಿಕೆ ಪ್ರಸ್ತಾಪ:

ಬಿಬಿಎಂಪಿಯಿಂದ ನಗರದ ವಿವಿಧ ಭಾಗಗಳಲ್ಲಿ ಹೊಸದಾಗಿ 12ಕ್ಕೂ ಹೆಚ್ಚು ಎಲಿವೇಟೆಡ್ ಮಾರ್ಗ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಆರಂಭಿಕ ಡಿಪಿಆರ್ ಕೂಡ ಕೈಗೊಂಡಿದ್ದು, ಇವುಗಳಲ್ಲಿ ನಾಗವಾರ ಹಾಗೂ ಹೆಣ್ಣೂರು ಮಾರ್ಗದಲ್ಲಿ ಎರಡು ಎಲಿವೇಟೆಡ್ ರಸ್ತೆಯೂ ಸೇರಿದೆ. ಈ ಹೊಸ ಮಾರ್ಗವು 4/6 ಪಥವಿದ್ದು ತಲಾ 12 ಕಿ.ಮೀ. ಉದ್ದವಿರಲಿದೆ. ಇದರ ಜತೆಗೆ ಹೊಸಕೋಟೆ ಹೆದ್ದಾರಿಯಿಂದ ಬೂದಿಗೆರೆ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸಿದರೆ ನಗರದ ಪೂರ್ವ ಭಾಗದಿಂದ ಏರ್‌ಪೋರ್ಟ್‌ಗೆ ಸುಲಭವಾಗಿ ಸಂಚರಿಸಬಹುದಾಗಿದೆ. ಈ ರಸ್ತೆಗಳಲ್ಲದೆ ಏರ್‌ಪೋರ್ಟ್ ಸುತ್ತ ಎಸ್‌ಟಿಆರ್‌ಆರ್‌ಗೆ ಸಂಪರ್ಕಿಸುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬ ಕೂಗು ಎದ್ದಿದ್ದು, ಇದಕ್ಕೆ ಸರ್ಕಾರ ಇನ್ನಷ್ಟೇ ಸ್ಪಂದಿಸಬೇಕಿದೆ.

ಏರ್‌ಪೋರ್ಟ್ ರಸ್ತೆ ಸುಧಾರಣೆ ಹೇಗೆ?:

* ಹೆಬ್ಬಾಳದಿಂದ ಟೋಲ್‌ಗೇಟ್‌ವರೆಗಿನ ಮಾರ್ಗದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವುದು.

* ಸಿಗ್ನಲ್‌ಮುಕ್ತ ಕಾರಿಡಾರ್ ರಸ್ತೆಯಲ್ಲಿ ಆಟೋ, ಟಿಪ್ಪರ್, ದ್ವಿಚಕ್ರವಾಹನಗಳಿಗೆ ಕಡಿವಾಣ ಹಾಕುವುದು.

* ಸರ್ವಿಸ್ ರೋಡ್‌ಗಳ ಮೇಲ್ದರ್ಜೆ, ಎರಡೂ ಬದಿ ಮಳೆನೀರು ಚರಂಡಿ, ಕೇಬಲ್ ಡಕ್ಟ್ ನಿರ್ಮಾಣ.

* ದಿನದ 24/7 ಗಂಟೆ ಸಂಚಾರ ಪೊಲೀಸ್ ನಿಗಾ, ಹೆದ್ದಾರಿ ಗಸ್ತು ಹೆಚ್ಚಿಸುವುದು.

* ಏರ್‌ಪೋರ್ಟ್ ಮಾರ್ಗದುದ್ದಕ್ಕೂ ಸರ್ವಿರ್ಸ್ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧ.