ನ್ಯೂಸ್

ಎಂಎಲ್‌ಸಿ ಮನೆಗೂ ನೀರಿಲ್ಲ: ಆಯನೂರು ಆಕ್ರೋಶ

ಶಿವಮೊಗ್ಗ: ನನ್ನ ಮನೆ ನಗರದ ಹೃದಯ ಭಾಗ ಎನಿಸಿರುವ ಮಿಷನ್ ಕಾಂಪೌಂಡ್‌ನಲ್ಲಿದೆ. ಆದರೆ ನನ್ನ ಮನೆಗೆ ವಾರದಲ್ಲಿ ಎರಡು ದಿನ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದೇನಾ ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕೆಯುಡಬ್ಲುೃಎಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರ ಪಾಲಿಕೆ ಹಾಗೂ ಕೆಯುಡಬ್ಲುೃಎಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವಜನಿಕ ವಲಯದಲ್ಲಿ ಕುಡಿಯುವ ನೀರು ಪೂರೈಕೆ ಬಗ್ಗೆ ವ್ಯಾಪಕ ಆಕ್ರೋಶವಿದೆ. ಇದು ಜನಪ್ರತಿನಿಧಿಗಳ ಅರಿವಿಗೆ ಬಂದಿದೆ. ಆದರೂ ಅಧಿಕಾರಿಗಳ ವಲಯದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ ಎಂದು ಹೇಳಿದರು.

ತುಂಗಾ ನದಿ ದಡದಲ್ಲಿದ್ದರೂ ಶಿವಮೊಗ್ಗ ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ದಿನ ನೂರಾರು ಮಂದಿ ಫೋನ್ ಮೂಲಕ ದೂರು ಹೇಳುತ್ತಾರೆ. ಅವರಿಗೆ ಉತ್ತರ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸಮಪರ್ಕ ನೀರು ಪೂರೈಕೆಗೆ ಉಂಟಾಗಿರುವ ಸಮಸ್ಯೆಯಾದರೂ ಏನು ಎಂದು ಹರಿಹಾಯ್ದರು.

ಅನೇಕ ಸರ್ಕಾರಿ ಕಚೇರಿಗಳಿಗೆ ಅಕ್ರಮ ನೀರಿನ ಸಂಪರ್ಕವಿದೆ. ಸಾಮಾನ್ಯ ಜನರು ಅಕ್ರಮವಾಗಿ ಸಂಪರ್ಕ ಪಡೆದಿದ್ದರೆ ಅವರ ಮೇಲೆ ದಂಡ ಪ್ರಯೋಗ ಮಾಡುವ ಅಧಿಕಾರಿಗಳು, ಸರ್ಕಾರಿ ಕಚೇರಿಗಳ ತಂಟೆಗೆ ಹೋಗುತ್ತಿಲ್ಲ. ಇಂತಹ ಕಚೇರಿಗಳ ನೀರಿನ ಸಂಪರ್ಕವನ್ನೂ ಕಡಿತಗೊಳಿಸಬೇಕೆಲ್ಲವೇ ಎಂದು ಪ್ರಶ್ನಿಸಿದರು.

ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಅನೇಕ ಕಡೆಗಳಲ್ಲಿ ಕಸದ ರಾಶಿಗಳು ರಸ್ತೆ ಪಕ್ಕವೇ ಬಿದ್ದಿದೆ. ನನ್ನೊಂದಿಗೆ ಅಧಿಕಾರಿಗಳು ಬಂದರೆ ಅವರಿಗೆ ಕಸದ ರಾಶಿಗಳ ದರ್ಶನ ಮಾಡಿಸುತ್ತೇನೆ ಎಂದು ಆಯನೂರು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಯುಕ್ತ ಕೆ.ಮಾಯಣ್ಣ ಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.