ಯಳಂದೂರು: ತಾಲೂಕಿನ ಎ.ದೇವರಹಳ್ಳಿ ಗ್ರಾಮದ ಮೂಲ ಸಮಸ್ಯೆಗಳ ನಿವಾರಣೆಯಲ್ಲಿ ಶಾಸಕ ಎನ್.ಮಹೇಶ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಗ್ರಾಮಸ್ಥರು ಗುರುವಾರ ಹಾಳಾದ ರಸ್ತೆ ಬಳಿ ಪ್ರತಿಭಟನೆ ನಡೆಸಿದರು.
ಜಿಪಂ ಮಾಜಿ ಸದಸ್ಯ ಕಮಲ್ ಮಾತನಾಡಿ, ಎ.ದೇವರಹಳ್ಳಿ ಗ್ರಾಮ ಕೇವಲ 75 ಕುಟುಂಬಗಳಿಂದ ಕೂಡಿದ ಗೌಡಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತಾಲೂಕಿನ ಒಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಲಿಂಗಾಯತ ಸಮುದಾಯದವರೇ ಹೆಚ್ಚಾಗಿದ್ದಾರೆ. ಕಳೆದ 20 ವರ್ಷಗಳಿಂದಲೂ ಇಲ್ಲಿನ ಸಮಸ್ಯೆಗಳ ನಿವಾರಣೆಯಾಗಿಲ್ಲ. ಹಾಲಿ ಶಾಸಕರಾದ ಎನ್.ಮಹೇಶ್ ಚುನಾವಣೆ ಸಮಯದಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಇದನ್ನು ಮಾದರಿ ಗ್ರಾಮವಾಗಿ ಮಾಡುವ ಭರವಸೆ ನೀಡಿದ್ದು ಹುಸಿಯಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ನೀರು ಹೆಚ್ಚಾಗಿ ಬಂದಿದ್ದು, ಗದ್ದೆಯಲ್ಲಿ ನೀರು ತುಂಬಿಕೊಂಡಿತ್ತು. ಇದು ಹರಿದು ಹೋಗಲು ಗ್ರಾಮಕ್ಕೆ ತೆರಳುವ ರಸ್ತೆ ಅಗೆಯಲಾಗಿದೆ. ಇಲ್ಲಿನ ಜನರು ಸಾಗಬೇಕಾದರೆ ಈ ರಸ್ತೆಯ ಮೂಲಕವೇ ಹೋಗಬೇಕು. ರಸ್ತೆಗೆ ಚಪ್ಪಡಿ ಕಲ್ಲನ್ನು ಹಾಕಿ ಇದರ ಮೇಲೆ ತಮ್ಮ, ಬೈಕ್, ಬೈಸಿಕಲ್ ಸಾಗಿಸಬೇಕು. ಕಾರುಗಳು ಊರಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ಪ್ರಯಾಸಪಡುವ ಸ್ಥಿತಿ ನಿರ್ಮಾಣವಾಗಿದೆ. ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಡಿದರೆ ಗ್ರಾಮಕ್ಕೆ ಆಂಬುಲೆನ್ಸ್ ಬರಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಕನಿಷ್ಠ ಇಲ್ಲಿಗೆ ಡೆಕ್ ಹಾಕಿಸುವುದಕ್ಕೂ ಶಾಸಕರು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಈ ಗ್ರಾಮವೂ ಸೇರಿದಂತೆ ಇಡೀ ಕ್ಷೇತ್ರವನ್ನೇ ಮಾದರಿ ಮಾಡುವ ಭರವಸೆ ನೀಡಿದ್ದರು. ಆದರೆ ಇವರ ಅವಧಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇವರ ಸ್ವಗ್ರಾಮದಲ್ಲೇ ಇವರು ಗೋ-ಬ್ಯಾಕ್ ಮಹೇಶ್ ಎಂದು ಹೇಳಿಸಿಕೊಂಡಿರುವುದು ಇವರ ಕಾರ್ಯವೈಖರಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೂಡಲೇ ಗ್ರಾಮದ ರಸ್ತೆಯನ್ನು ಸರಿಪಡಿಸಬೇಕು. ಚರಂಡಿ, ರಸ್ತೆ ಸೇರಿದಂತೆ ಮೂಲ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಎಸ್‌ಪಿ ಮುಖಂಡ ರಾಜಪ್ಪ, ಗ್ರಾಪಂ ಸದಸ್ಯ ಪ್ರಭುಸ್ವಾಮಿ, ನಾಗೇಂದ್ರ, ಜಿ.ಎಂ.ಮಹದೇವಪ್ಪ, ಗೌಡ್ರಸುಂದ್ರಪ್ಪ, ಮಹಾದೇವಪ್ಪ, ಶಾಂತಮಲ್ಲು, ಶಿವಣ್ಣನಾಯಕ, ಚಿನ್ನಸ್ವಾಮಿ, ಎ. ದೇವರಹಳ್ಳಿ ಗ್ರಾಮಸ್ಥರು ಹಾಜರಿದ್ದರು.