ನ್ಯೂಸ್

ಎ ಆ್ಯಂಡ್ ಎ ಚಿಟ್ ಫಂಡ್, ಫೈನಾನ್ಸ್ ಹೆಸರಿನಲ್ಲಿ ಧೋಖಾ

ಬೆಂಗಳೂರು: ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರೂ. ಪಡೆದು ವಂಚಿಸಿ ಪರಾರಿಯಾಗಿದ್ದಾರೆ. ಆರೋಪಿತರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿನಗರದ ಪಿ.ಟಿ.ಸ್ಯಾವಿಯೋ ಎಂಬುವವರು ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ ೮ನೇ ಮುಖ್ಯರಸ್ತೆಯ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಸಂಸ್ಥೆಯ ಮಾಲೀಕರಾದ ಎ.ವಿ.ಟಾಮಿ ಮತ್ತು ಆತನ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್ ಫಂಡ್ ಕಾಯ್ದೆ, ಬಿಎನ್‌ಎಸ್ ವಿವಿಧ ಕಲಂಗಳ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಟ್ಯಂತರ ವಂಚನೆ:

ಕೇರಳ ಮೂಲದ ಎ.ವಿ.ಟಾಮಿ ಮತ್ತು ಶಿನಿ ಟಾಮಿ ೨೦೦೫ನೇ ಸಾಲಿನಿಂದ ನಗರದ ರಾಮಮೂರ್ತಿನಗರದಲ್ಲಿ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದರು. ಅಧಿಕ ಬಡ್ಡಿ ಆಸೆ ತೋರಿಸಿ ತನ್ನನ್ನು ಸೇರಿದಂತೆ ಹಲವರಿಂದ ಠೇವಣಿ ಮತ್ತು ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿ ಸಂಸ್ಥೆ ನಡೆಸುತ್ತಿದ್ದರು. ನಾನು ಹಾಗೂ ನನ್ನ ಕುಟುಂಬ ಈವರೆಗೆ ಸುಮಾರು ೭೦ ಲಕ್ಷ ರೂ. ಹಣ ಕಟ್ಟಿದ್ದೇವೆ. ಇದೇ ರೀತಿ ಹಲವರು ಕೋಟ್ಯಂತರ ರೂ. ಹಣವನ್ನು ಈ ಸಂಸ್ಥೆಗೆ ಕಟ್ಟಿದ್ದಾರೆ.

ಕಚೇರಿ ಬಂದ್ ಮಾಡಿ ಪರಾರಿ:

ಇತ್ತೀಚೆಗೆ ನಾವು ಸಂಸ್ಥೆಯ ಕಚೇರಿ ಬಳಿ ನೋಡಿದಾಗ ಕಚೇರಿ ಬಂದ್ ಆಗಿರುವುದು ಗಮನಕ್ಕೆ ಬಂದಿತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಟಾಮಿ ದಂಪತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಬ್ಬರ ಮೊಬೈಲ್‌ಗಳಿಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಬರುತ್ತಿದೆ. ಅಧಿಕ ಬಡ್ಡಿ ಆಸೆ ತೋರಿಸಿ ತನ್ನನ್ನು ಸೇರಿದಂತೆ ಹಲವರಿಂದ ಠೇವಣಿ ಹಾಗೂ ಚೀಟಿ ರೂಪದಲ್ಲಿ ಕೋಟ್ಯಂತರ ರೂ. ಪಡೆದು ವಂಚಿಸಿ ಪರಾರಿಯಾಗಿರುವ ಟಾಮಿ ದಂಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನನ್ವಯ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಿಸಿಬಿಗೆ ವರ್ಗಾವಣೆ!

ಟಾಮಿ ದಂಪತಿ ೧೦೦ಕ್ಕೂ ಅಧಿಕ ಮಂದಿಗೆ ಅಂದಾಜು ೧೪ ಕೋಟಿಗೂ ಅಧಿಕ ಹಣವನ್ನು ವಂಚಿಸಿರುವ ಸಾಧ್ಯತೆಯಿದೆ. ಸದ್ಯ ಇಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಆರೋಪಿಗಳು ನೂರಾರು ಮಂದಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ತನಿಖೆಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

A&A Chit Fund, fraud in the name of finance