ಶೃಂಗೇರಿ: ಮಳೆ ದೇವರೆಂದೇ ಕರೆಯಲ್ಪಡುವ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವರ ಚಿಕ್ಕ ರಥೋತ್ಸವ ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಪ್ರತಿ ವರ್ಷದಂತೆ ಧನುರ್ಮಾಸದ ಎರಡನೇ ದಿನ ನಡೆಯುವ ಕುಡಿ ತೇರು ರಥೋತ್ಸವ ಕಿಗ್ಗಾದ ಮುಖ್ಯಬೀದಿಯಲ್ಲಿ ನಡೆಯಿತು. ರಥವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥ ಸಾಗುವ ದಾರಿಯನ್ನು ಸ್ವಚ್ಛಗೊಳಿಸಿ ತಳಿರು, ತೋರಣ, ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ರಥದ ಎದುರು ಛತ್ರಿ, ಚಾಮರ, ವಾದ್ಯ ಸೇವೆ, ದೀವಿಟಿಗೆ ಸಹಿತ ಮಂತ್ರಘೋಷದೊಂದಿಗೆ ರಥವನ್ನು ಎಳೆಯಲಾಯಿತು. ಬೆಳಗ್ಗೆ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ತಂದು ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಂಗಳಾರತಿ ನಂತರ ರಥವನ್ನು ಎಳೆಯಲಾಯಿತು.
ಅರ್ಚಕರಾದ ಶಿವರಾಂ ಭಟ್, ತಂತ್ರಿ ವಿಶ್ವನಾಥಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಶ್ಯಾನುಭೋಗ್ ಅರುಣಾಚಲಾ, ತಹಸೀಲ್ದಾರ್ ಅನೂಪ್ ಸಂಜೋಗ್, ಕಂದಾಯ ಇಲಾಖೆ ಅಧಿಕಾರಿಗಳು, ಭಕ್ತಾದಿಗಳು ಇದ್ದರು.