ಕೋಲಾರ: ನಗರದ ಹಳೇ ಡಿಸಿ ಕಚೇರಿ ಕ್ಯಾಂಪಸ್‌ನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಆಗಾಗ ಗ್ರಹಣ ಹಿಡಿಯುತ್ತಿದ್ದು ಮುಕ್ತಿ ಯಾವಾಗ ಎಂಬ ಸಾರ್ವಜನಿಕರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಬೇಕಾಗಿದೆ.
ಮುಳಬಾಗಿಲು ಶಾಸಕ ಎಚ್.ನಾಗೇಶ್, ಸಚಿವರಾಗಿದ್ದಾಗ ಕಚೇರಿ ತೆರೆಯಲಾಗಿತ್ತು. 2021ರ ಮಾರ್ಚ್‌ನಿಂದಲೂ ಕಚೇರಿ ಬಂದ್ ಆಗಿದ್ದು, ಪ್ರಸ್ತುತ ಕರೊನಾ ನಿಯಂತ್ರಣಕ್ಕಾಗಿ ನಿಯೋಜನೆಗೊಂಡಿರುವ ತೋಟಗಾರಿಕೆ ಸಚಿವ ಮುನಿರತ್ನ ಅಧಿಕಾರ ವಹಿಸಿಕೊಂಡು 7 ತಿಂಗಳಾದರೂ ಒಮ್ಮೆಯೂ ಕಚೇರಿ ಬಾಗಿಲು ತೆರೆಯದಿರುವುದು ಜಿಜ್ಞಾಸೆಯನ್ನುಂಟು ಮಾಡಿದೆ.
ನಾಗೇಶ್, ಅಧಿಕಾರದ ಅವಧಿಯಲ್ಲಿ ಕಚೇರಿಗೆ ಭೇಟಿ ನೀಡಿದ್ದು ವಿರಳ. ಈ ವೇಳೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಕಚೇರಿ ಬಿಕೋ ಎನ್ನುತ್ತಿತ್ತು. ಸಚಿವರು ಬಂದ ತಪ್ಪಿಗೆ ಅಧಿಕಾರಿಗಳ ಜತೆ ಕೆಲ ನಿಮಿಷ ಚರ್ಚಿಸಿ, ಟೀ ಕುಡಿದು ಹೋಗುತ್ತಿದ್ದರು.
ಕಳೆದ 7 ತಿಂಗಳಿಂದ ಕಚೇರಿಯಲ್ಲಿ ಧೂಳು ತುಂಬಿದ್ದು, ಸಿಬ್ಬಂದಿ ಇಲ್ಲದೆ ಭಣಗುಟ್ಟುತ್ತಿದೆ. ನಾಗೇಶ್‌ಗೂ ಮುಂಚೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೃಷ್ಣಬೈರೇಗೌಡ ಉಸ್ತುವಾರಿ ವಹಿಸಿಕೊಂಡಿದ್ದರಾದರೂ ಕಚೇರಿ ಕಡೆ ಸುಳಿದಿದ್ದು ಅಪರೂಪ, ಇದಕ್ಕೂ ಮೊದಲ ಸಿದ್ದರಾಮಯ್ಯ ಆಳ್ವಿಕೆಯಲ್ಲಿ ರಮೇಶ್ ಕುಮಾರ್ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾಗ ಕಚೇರಿ ಬಾಗಿಲು ಪ್ರತಿದಿನ ತೆರೆಯುತ್ತಿತ್ತು.
ಜಿಲ್ಲೆಯ ಹಿರಿಯ ಮುತ್ಸದ್ಧಿ ರಾಜಕಾರಣಿ ಸಿ.ಬೈರೇಗೌಡ, ಹಾಲಿ ಶಾಸಕ ಶಿಡ್ಲಘಟ್ಟದ ವಿ.ಮುನಿಯಪ್ಪ ಕಾಲದಲ್ಲಿ ಉಸ್ತುವಾರಿ ಕಚೇರಿ ತುಂಬಿ ತುಳುಕುತ್ತಿತ್ತು. ವಿ.ಮುನಿಯಪ್ಪ ಅವರು ಸರ್ಕಾರಿ ಸಭೆ, ಸಮಾರಂಭಕ್ಕೆ ಬಂದಾಗ ಕಚೇರಿಯಲ್ಲಿ ಕುಳಿತು ಜನರ ಅಹವಾಲುಗಳಿಗೆ ಸ್ಪಂದಿಸುವ ಮೂಲಕ ಉಸ್ತುವಾರಿ ಕಚೇರಿಗೆ ಕಿಮ್ಮತ್ತು ಇರುವುದನ್ನು ರುಜುವಾತುಪಡಿಸಿದ್ದರು. ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್ ಕಚೇರಿಗೆ ಬಂದದ್ದು ಅಪರೂಪ, ಕೆ.ಶ್ರೀನಿವಾಸಗೌಡ ಅವರು ತಮ್ಮ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದರಿಂದ ಉಸ್ತುವಾರಿ ಕಚೇರಿ ಜನರಿಂದ ದೂರವಾಗಿತ್ತು.
ಕಚೇರಿಗೆ ಕಾಲಿಡದ ಸಚಿವರು: 2008ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಾಲೂರಿನ ಕೃಷ್ಣಯ್ಯಶೆಟ್ಟಿ ಕೆಲವು ತಿಂಗಳು ಸಚಿವರಾಗಿದ್ದರಾದರೂ ಉಸ್ತುವಾರಿ ಕಚೇರಿಗೆ ಕಳೆ ತಂದುಕೊಡುವ ಪ್ರಯತ್ನ ನಡೆಸಲಿಲ್ಲ. ವರ್ತೂರು ಪ್ರಕಾಶ್ ಕೋಲಾರದ ಬೈರೇಗೌಡ ಬಡಾವಣೆಯ ಬಾಡಿಗೆ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದರಿಂದ ಕಡತಗಳ ವಿಲೇವಾರಿ, ಅಧಿಕಾರಿಗಳೊಂದಿಗೆ ಸಭೆ ಮನೆಯಲ್ಲೇ ನಡೆಯುತ್ತಿತ್ತು. ಇದಕ್ಕೂ ಮೊದಲು ಕೆಲ ದಿನ ಜಿಲ್ಲೆಗೆ ಅತಿಥಿಗಳಾಗಿ ಬಂದ ಮಂಡ್ಯ ಜಿಲ್ಲೆಯ ನಾಗಮಂಗಲದ ಚೆಲುವರಾಯಸ್ವಾಮಿ, ಹಾಲಿ ಸಂಸದ ಹೊಸಕೋಟೆಯ ಬಿ.ಎನ್.ಬಚ್ಚೇಗೌಡ, ಕೇಂದ್ರ ಮಂತ್ರಿ ಆನೇಕಲ್ ನಾರಾಯಣಸ್ವಾಮಿ, ಬಾಲಚಂದ್ರ ಜಾರಕಿಹೊಳಿ ಅವರು ಉಸ್ತುವಾರಿ ಸಚಿವರ ಕಚೇರಿಯ ಕಡೆ ಕಾಲಿಡಲಿಲ್ಲ.
ಸಾವಿರಾರು ರೂ. ಖರ್ಚು: ನಗರದ ಹೃದಯಭಾಗದಲ್ಲಿರುವ ಉಸ್ತುವಾರಿ ಸಚಿವರ ಕಚೇರಿಗೆ ಸಾವಿರಾರು ರೂ. ಖರ್ಚು ಮಾಡಿ ಪೀಠೋಪಕರಣ, ವಿದ್ಯುತ್, ಕಂಪ್ಯೂಟರ್, ಫೋನ್, ಸಿಬ್ಬಂದಿ ವ್ಯವಸ್ಥೆ ಮಾಡಿಯೂ ಉಸ್ತುವಾರಿ ಸಚಿವರು ವಾರಕ್ಕೊಮ್ಮೆ ಬಂದು ಜನರ ಕಷ್ಟಸುಖ ವಿಚಾರಿಸಲು ಸಮಯ ನೀಡದಿರುವುದು ಏಕೆ ಎಂಬ ಪ್ರಶ್ನೆಗೆ ಸಿಎಂ ಅವರಿಂದ ಮಾತ್ರ ಉತ್ತರ ನಿರೀಕ್ಷಿಸಬಹುದಾಗಿದೆ.
ಜಿಲ್ಲೆಯವರು ಉಸ್ತುವಾರಿ ಸಚಿವರಾಗಿದ್ದಲ್ಲಿ ಅನುಕೂಲವಾಗಿರುತ್ತಿತ್ತು. ಸಚಿವ ಮುನಿರತ್ನ ಅವರಿಗೆ ಸರ್ಕಾರ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕು. ಎರಡು ವಾರ ಕಳೆದರೂ ಡಿಸಿ ನೇಮಕವಾಗಿಲ್ಲ. ಇದು ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ. ಇನ್ನಾದರೂ ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಾಗಲಿ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿಲ್ಲೆಯ ಜನರ ಕಷ್ಟ ವಿಚಾರಿಸುವಲ್ಲಿ ಉಸ್ತುವಾರಿ ಸಚಿವರು ಕಚೇರಿ ಬಳಸಿಕೊಳ್ಳಬೇಕು. ಕನಿಷ್ಠ 10 ದಿನಕ್ಕೆ ಒಮ್ಮೆ ಕಚೇರಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸಿದರೆ ಜನರಿಗೆ ಸರ್ಕಾರದ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಸಚಿವ ಮುನಿರತ್ನ ಅವರಿಗೆ ಈ ಬಗ್ಗೆ ಸಲಹೆ ನೀಡುವೆ. ಕೆ.ಶ್ರೀನಿವಾಸಗೌಡ, ಶಾಸಕ, ಕೋಲಾರ