ನ್ಯೂಸ್

ಉದ್ಯೋಗ ಗಿಟ್ಟಿಸಿಕೊಂಡ 90 ವಿದ್ಯಾರ್ಥಿನಿಯರು

ಹುಣಸೂರು: ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಉದ್ಯೋಗ ಮೇಳದಲ್ಲಿ 90 ವಿದ್ಯಾರ್ಥಿನಿಯರು ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಳಿಸಿದರು. ಮೇಳದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಪೈಕಿ 220 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದರು.


ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ ಮೇಳ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಬಗೆಗಿನ ಪುರಾತನ ಸಿದ್ಧಾಂತಗಳು ಮತ್ತು ವಿಚಾರಗಳು ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿಹೋಗಿವೆ. ಈಗ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾನತೆಯನ್ನು ಸಾಧಿಸುವ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿದ್ದಾರೆ ಎಂದರು.


ಪ್ರಾಂಶುಪಾಲ ಪುಟ್ಟಶೆಟ್ಟಿ ಮಾತನಾಡಿ, ಮಹಿಳೆಯರು ಸಾಮಾಜಿಕ ಸಮಾನತೆ ಸಾಧಿಸುವ ದಿಕ್ಕಿನಲ್ಲಿ ಮುನ್ನೆಡಯಬೇಕು ಎಂದು ತಿಳಿಸಿದರು. ಟಿ.ವಿ.ಎಸ್. ಕಂಪನಿಯ ವ್ಯವಸ್ಥಾಪಕ ಎಂ.ಮನೀಷ್, ಕೆ.ಐ.ಎ.ಡಿ.ಎಂ.ನ ವ್ಯವಸ್ಥಾಪಕ ಸೂರ್ಯನಾರಾಯಣ್ ಅವರು ತಮ್ಮ ಕಂಪನಿಗಳು ನೀಡುವ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.


ಅಧ್ಯಾಪಕರಾದ ಪ್ರೊ.ರಾಜಶೇಖರ್, ಡಾ.ಟಿ.ಕೆ.ಬೋಪಯ್ಯ, ಡಾ.ದೀಪುಕುಮಾರ್, ಎಲ್.ಎಸ್ ಮಂಜುನಾಥ್ ಅರಸು, ಕನ್ನಡ ಪ್ರಾಧ್ಯಾಪಕ ಡಾ.ಗುರುಸ್ವಾಮಿ ಇತರರು ಇದ್ದರು.


ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು, ಸಂತಜೋಸೆಫರ ಪ್ರಥಮದರ್ಜೆ ಕಾಲೇಜು, ಜ್ಞಾನಧಾರ ಪ್ರಥಮ ದರ್ಜೆ ಕಾಲೇಜು, ಬಿಳಿಕೆರೆ, ಹನಗೋಡಿನ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.