ಉದ್ಯಮಶೀಲತೆಯು ಮತ್ತಷ್ಟು ಸ್ವಾವಲಂಬಿ ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸಿಕೊಡುವಲ್ಲಿ ನೆರವಾಗುತ್ತಿದೆ ಎಂದು ಯುವ ಉದ್ಯಮಿ ಶ್ರೀನಿಧಿ ತಿಳಿಸಿದರು.
ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ಟಾರ್ಟ್‌ಅಪ್ ಸೆಲ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿನೂತನ ಆಲೋಚನೆಯ ಭಿತ್ತಿ ಬರಹ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಇರುವ ವಿಪುಲ ಅವಕಾಶಗಳನ್ನು ಗಮನಿಸಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸದುಪಯೋಗವಾಗುವಂತೆ ಬಳಸಿಕೊಂಡು ಉದ್ಯಮಶೀಲತೆ ಬೆಳೆಸಿಕೊಂಡು ಸಾಧಕರಾಗಬೇಕು. ಉದ್ಯಮಶೀಲ ವಿಭಿನ್ನ ಆಲೋಚನೆಗಳು ಹೊಸ ಹೊಸ ಅವಕಾಶಗಳನ್ನು ನಿರ್ಮಿಸಬಲ್ಲವು. ಜತೆಗೆ ದೇಶದ ಸದೃಢ ಉದ್ಯಮಶೀಲ ಬೆಳವಣಿಗೆಗೆ ನೆರವಾಗಬಲ್ಲದು ಎಂದರು.
ಶಿಕ್ಷಣವು ಯುವಜನರ ಭವಿಷ್ಯದ ವಿಭಿನ್ನ ಅವಕಾಶಗಳಿಗೆ ತೆರೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ತರಗತಿಯ ಕಲಿಕೆಯನ್ನು ತಮ್ಮ ಕ್ರಿಯಾಶೀಲ ಚಿಂತನೆಗಳೊಂದಿಗೆ ಪ್ರಯೋಗಾತ್ಮಕವಾಗಿ ರೂಢಿಸಿಕೊಳ್ಳಲು ಅನುಕೂಲವಾಗುತ್ತಿದೆ. ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವಾಗುತ್ತಿದೆ. ಇದು ಎಲಾನ್‌ಮಸ್ಕ್, ಬಿಲ್‌ಗೇಟ್ಸ್‌ರಂತಹ ಉದ್ಯಮಿಗಳು, ಇನ್ಫೋಸಿಸ್, ವಿಪ್ರೋ, ಆ್ಯಪಲ್, ಮೈಕ್ರೋಸಾಫ್ಟ್, ಫಿಜ್ಜಾಹಟ್, ಓಲಾದಂತಹ ಕಂಪನಿಗಳು ನಿಮಗೆ ಮಾದರಿಯಾಗಬೇಕು. ಕಾಲೇಜುಗಳಲ್ಲಿ ಆಯೋಜನೆಗೊಳ್ಳುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಉದ್ಯಮಶೀಲತೆಯನ್ನು ಪ್ರೇರೇಪಿಸಿ ಪ್ರೋತ್ಸಾಹಿಸಲು ನೆರವಾಗುತ್ತವೆ ಎಂದು ಶ್ರೀನಿಧಿ ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಉದ್ಯಮಶೀಲತೆಯು ವಿದ್ಯಾರ್ಥಿಗಳಿಗೆ ಹೊಸ ಹೊಸ ಆಲೋಚನೆಗಳನ್ನು ಪ್ರಯೋಗಾತ್ಮಕವಾಗಿ ಪ್ರಸ್ತುತಪಡಿಸಲು ನೆರವಾಗಿದೆ. ಇದರಿಂದ ಆಧುನಿಕ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಹೊಸತರ ಹುಡುಕಾಟಗಳು ಆರಂಭವಾಗಿ ಹೊಸ ಉದ್ಯಮಗಳ ಸ್ಥಾಪನೆಗೆ ನೆರವಾಗಿದೆ. ಸರ್ಕಾರವು ನವ ಉದ್ಯಮಗಳ ಸ್ಥಾಪನೆಗೆ ಕೈಗೊಂಡಿರುವ ಕ್ರಮಗಳು, ಸೃಷ್ಟಿಸಿರುವ ಅವಕಾಶಗಳು, ಸಾಲ ಸೌಲಭ್ಯಗಳು ಹೇರಳವಾಗಿವೆ. ಇವುಗಳನ್ನು ಬಳಸಿಕೊಂಡು ತಮ್ಮದೇ ಆದ ಸ್ವಉದ್ಯಮಗಳನ್ನು ಸ್ಥಾಪಿಸಿ ನೂರಾರು ಉದ್ಯೋಗಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನದ ಬಳಕೆಯ ಜತೆಗೆ ಮಾರುಕಟ್ಟೆಯ ಕೌಶಲಗಳು ಕೂಡ ಉದ್ಯಮದ ಅಭಿವೃದ್ಧಿಗೆ ಅತ್ಯಂತ ಅವಶ್ಯಕ ಎಂದರು.
ಬಹುಮಾನ ವಿಜೇತರು: ಸ್ಟಾರ್ಟ್‌ಅಪ್ ಸೆಲ್‌ನ ಭಿತ್ತಿ ಬರಹ ಪ್ರದರ್ಶನದಲ್ಲಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮೋನಿಷಾ ಪ್ರಥಮ ಸ್ಥಾನ, ಸ್ನಾತಕೋತ್ತರ ಬಯೋಟೆಕ್ ವಿಭಾಗದ ಕೆ.ಬಿ. ಕೀರ್ತನಾ ದ್ವಿತೀಯ ಹಾಗೂ ಎನ್.ಪಿ. ಯೋಗಿತಾ ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಪ್ರಾಂಶುಪಾಲ ಡಾ. ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಪ್ರಭುಸ್ವಾಮಿ, ಐಕ್ಯುಎಸಿ ಸಂಯೋಜಕ ಡಾ.ಎನ್. ರಾಜೇಂದ್ರಪ್ರಸಾದ್, ಸ್ಟಾರ್ಟ್ ಅಪ್ ಸೆಲ್‌ನ ಸಂಯೋಜಕ ಡಾ.ಮಹದೇವಸ್ವಾಮಿ ಇದ್ದರು.