ನ್ಯೂಸ್

ಉದಯಗಿರಿ ಪ್ರಕರಣ:ಸತೀಶ್ ಅಲಿಯಾಸ್ ಪಾಂಡುರಂಗಗೆ ಜಾಮೀನು

ನಗರದ ಉದಯಗಿರಿಯಲ್ಲಿ ಸೋಮವಾರ ರಾತ್ರಿ ನಡೆದ ಕಲ್ಲುತೂರಾಟ ಪ್ರಕರಣ ಕಾರಣವಾಗಿದ ಸಾಮಾಜಿಕ ಜಾಲತಾಣದ ಪೋಸ್ಟ್ ಹಾಕಿದ್ದ ಎನ್ನಲಾದ ವ್ಯಕ್ತಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಬಂಧಿತನಾಗಿದ್ದ ಸತೀಶ್ ಅಲಿಯಾಸ್ ಪಾಂಡುರಂಗಗೆ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ನೀಡುವ ಬಗ್ಗೆ ಶನಿವಾರ ನಡೆದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾದ ಸವಿತಾ ಅವರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ವಾದ ಮಂಡಿಸಿ ಜಾಮೀನು ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

‘ಪೊಲೀಸರು ದಾಖಲಿಸಿರುವ ಎಫ್‌ಐಆರ್ ದೋಷಪೂರಿತವಾಗಿದೆ. ವಿವಾದಿತ ಎನ್ನಲಾದ ಪೋಸ್ಟರನ್ನು ಯಾರು ತಯಾರು ಮಾಡಿದ್ದಾರೆ ಎಂಬ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ಪೊಲೀಸರು ಒದಗಿಸಿಲ್ಲ. ಅಲ್ಲದೇ ಆರೋಪಿಯ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿರಲಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. ಒಬ್ಬರ ಶೂರಿಟಿಯೊಂದಿಗೆ ಈ ರೀತಿಯ ಅಪರಾಧಗಳಲ್ಲಿ ಭಾಗಿಯಾಗಬಾರದು ಪೊಲೀಸರ ವಿಚಾರಣೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ ಎಂದು ಆರೋಪಿ ಪರ ವಕೀಲರಾದ ಅ.ಮ.ಭಾಸ್ಕರ್ ತಿಳಿಸಿದ್ದಾರೆ.