ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ನಗರದ ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟದ ಘಟನೆಯಲ್ಲಿ ಪೊಲೀಸರದ್ದು ಯಾವ ತಪ್ಪೂ ಇಲ್ಲ. ಅವರು ಸರಿಯಾಗಿಯೇ ಕೆಲಸ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮೈಸೂರಿನ ನೆಲದಲ್ಲೇ ನಿಂತು ಹೇಳುತ್ತಿದ್ದೇನೆ, ನಮ್ಮ ಪೊಲೀಸರದ್ದು ಯಾವ ತಪ್ಪೂ ಇಲ್ಲ. ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಸಮಯಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ. ಸಚಿವ ರಾಜಣ್ಣ ಈ ವಿಚಾರದಲ್ಲಿ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿಗಳೇ ಉತ್ತರ ನೀಡುತ್ತಾರೆ. ಅವರು ಸದ್ಯಕ್ಕೆ ಮಾತನಾಡಲು ಆಗುತ್ತಿಲ್ಲ. 8 ರಿಂದ 10 ದಿನಗಳಲ್ಲಿ ಅವರೇ ಮಾತನಾಡುತ್ತಾರೆ ಎಂದರು.
ಉದಯಗಿರಿ ಪೊಲೀಸ್ ಠಾಣೆ ಎದುರು ಕಲ್ಲು ಎಸೆದಿರುವವರೆಲ್ಲಾ 14, 15ನೇ ವಯಸ್ಸಿನ ಮುಸ್ಲಿಂ ಹುಡುಗರು. ಧಾರ್ಮಿಕ ಮುಖಂಡರ ಮಾತನ್ನೂ ಅವರು ಕೇಳಿಲ್ಲ. ಹಿರಿಯರು ಹಾಗೂ ಮುಖಂಡರು ಸೇರಿ ಗಲಾಟೆ ನಿಯಂತ್ರಿಸಿದ್ದಾರೆ. ಪೊಲೀಸರಿಗಾದರೆ ರಕ್ಷಣೆ ಇತ್ತು. ಪಾಪ, ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ. ಗಲಭೆ ಮಾಡಿದವರ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.