ಸಮಾಜದ ಕೊರತೆಗಳನ್ನು ನಿವಾರಿಸಿ, ಶಕ್ತಿಯನ್ನು ವರ್ಧಿಸಲು ಸರ್ಕಾರೇತರ ಸಂಸ್ಥೆಗಳು (ಎನ್ಜಿಒ) ಬೇಕು ಎಂಬುದೇನೋ ಸರಿಯೇ. ಅಲ್ಲದೆ, ಇಂಥ ಸಾಕಷ್ಟು ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ ಬದಲಾವಣೆಯ ಪಥದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದು ಸುಳ್ಳಲ್ಲ. ಆದರೆ, ಕೆಲ ಎನ್ಜಿಒಗಳು ‘ಸಮಾಜಸೇವೆ’ಯ ಸೋಗು ಹಾಕಿಕೊಂಡು ಅವ್ಯವಹಾರದಲ್ಲಿ ತೊಡಗಿರುವುದು, ರಾಷ್ಟ್ರಘಾತಕ ಕೆಲಸಗಳಿಗೆ ಕೈಜೋಡಿಸುತ್ತಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಇಂಥ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ಸಮಾಜದಲ್ಲಿ ಅಪಾಯಕಾರಿ ಬೇರುಗಳನ್ನು ವಿಸ್ತರಿಸುತ್ತಿರುವ ಶಕ್ತಿಗಳನ್ನು ನಿಯಂತ್ರಿಸಲು ಸಾಧ್ಯ.
ವಿದೇಶಿ ದೇಣಿಗೆ ಸ್ವೀಕರಿಸಲು ಅಗತ್ಯವಾದ ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್ (ಎಫ್ಸಿಆರ್ಎ) ಪ್ರಕಾರ ಪಡೆಯಬೇಕಾದ ಪರವಾನಗಿ ನವೀಕರಿಸದ ಕಾರಣ 12,000ಕ್ಕೂ ಹೆಚ್ಚು ಎನ್ಜಿಒಗಳ ಎಫ್ಸಿಆರ್ಎ ಪರವಾನಗಿಗಳನ್ನು ಶನಿವಾರ ರದ್ದುಪಡಿಸಲಾಗಿದೆ. ಪರವಾನಗಿ ನವೀಕರಣಕ್ಕೆ ಡಿ.31ರ ಮಧ್ಯರಾತ್ರಿ ಗಡುವು ಇದ್ದ 6,000ಕ್ಕೂ ಹೆಚ್ಚು ಎನ್ಜಿಒಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದ ಕಾರಣ ರದ್ದುಗೊಂಡಿವೆ. ಒಟ್ಟಾರೆಯಾಗಿ 12,000ಕ್ಕೂ ಹೆಚ್ಚು ಎನ್ಜಿಒಗಳು ಪರವಾನಗಿ ಕಳೆದುಕೊಂಡಿವೆ. ಸದ್ಯ 16,829 ಎನ್ಜಿಒಗಳು ಮಾತ್ರವೇ ಎಫ್ಸಿಆರ್ಎ ಲೈಸೆನ್ಸ್ ಹೊಂದಿವೆ.
ಇಂಥ ಕ್ರಮ ಇದೇ ಮೊದಲೇನಲ್ಲ. ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ 2020ರ ಅಕ್ಟೋಬರ್ನಲ್ಲಿ ಕಾಶ್ಮೀರ, ಬೆಂಗಳೂರು ಸೇರಿ ದೇಶದ 12 ಕಡೆ ಎನ್ಜಿಒಗಳು ಮತ್ತು ಇತರ ಸಂಘಟನೆಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದಕ್ಕೂ ಮುನ್ನವೇ, ವಿದೇಶದಿಂದ ದೇಣಿಗೆ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಎನ್ಜಿಒಗಳಿಗೆ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ ಇಂಥ ಸಾವಿರಾರು ಸಂಸ್ಥೆಗಳ ಅನುಮತಿಯನ್ನೇ ರದ್ದುಗೊಳಿಸಿತ್ತು ಮತ್ತು ಉಳಿದ ಎನ್ಜಿಒಗಳ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆ ಜಾರಿಗೊಳಿಸಿತು. ಕರ್ನಾಟಕದಲ್ಲೂ ಎನ್ಜಿಒಗಳ ಅವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ 2018ರಲ್ಲೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ಈ ದೇಶದಲ್ಲೇ ನೆಲೆಸಿ, ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡು, ಎನ್ಜಿಒಗಳು ದೇಶಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ನಡೆಸುವುದು ಅಕ್ಷಮ್ಯ. ಎನ್ಜಿಒಗಳ ಕಾರ್ಯನಿರ್ವಹಣೆ ಪಾರದರ್ಶಿ, ಸಮಾಜಮುಖಿ ಆಗಿರಬೇಕೆ ಹೊರತು ರಾಷ್ಟ್ರವಿರೋಧಿ ತತ್ತ್ವಗಳನ್ನು ಬೆಂಬಲಿಸಬಾರದು. ಸ್ವಯಂಸೇವಾ ಸಂಸ್ಥೆಗಳು ಸೇವೆಯ ಶ್ರೇಷ್ಠ ಮಾಧ್ಯಮಗಳಾಗಿ, ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡಬೇಕು. ಕೆಲ ಸಂಸ್ಥೆಗಳ ಅಪಸವ್ಯದಿಂದ ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆಗಳು ಕೂಡ ಅನುಮಾನದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ವಿವಿಧ ಕ್ಷೇತ್ರಗಳ ಶ್ರೇಯೋಭಿವೃದ್ಧಿಗೆ ಎನ್ಜಿಒಗಳ ಕೊಡುಗೆ ಅನನ್ಯ. ಅವು ಸುಧಾರಣೆಯ ಪ್ರಬಲ ಮಾಧ್ಯಮಗಳಾಗಿ, ಭರವಸೆಯ ಆಶಾಕಿರಣವಾಗಿ ಹೊಮ್ಮಬೇಕು. ಈ ನಿಟ್ಟಿನಲ್ಲಿ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ, ಇತರ ಚಟುವಟಿಕೆಗಳಲ್ಲಿ ದಕ್ಷತೆ, ಪ್ರಾಮಾಣಿಕತೆ ಹೊಂದುವುದು ಅಗತ್ಯ ಎಂಬುದನ್ನು ಮರೆಯಬಾರದು. ಜನರ ನಂಬಿಕೆ ಕಳೆದುಕೊಂಡರೆ ಅದನ್ನು ಮರಳಿ ಗಳಿಸುವುದು ತುಂಬ ಕಷ್ಟ ಎಂಬ ವಾಸ್ತವವನ್ನು ಸ್ವಯಂಸೇವಾ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು.