ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 18 ನೇ ಅವಧಿಗೆ ಲೋಕಸಭಾ ಸದಸ್ಯರ ಆಯ್ಕೆಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಕೆಲವೆಡೆ ವಿದ್ಯುನ್ಮಾನ ಮತ ಯಂತ್ರಗಳು ಕೈಕೊಟ್ಟಿದ್ದು, ಬಿಟ್ಟರೆ ಯಾವುದೇ ಗಂಭೀರ ಅಹಿತಕರ ಘಟನೆಗಳು ನಡೆದಿಲ್ಲ. ಶೇ.76 ರಷ್ಟು ಮತದಾನವಾಗಿದೆ.
ಉತ್ತರ ಕನ್ನಡ ಜಿಲ್ಲೆಯ 6 ಹಾಗೂ ಬೆಳಗಾವಿಯ ಕಿತ್ತೂರು, ಖಾನಾಪುರ ಸೇರಿ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1977 ಮತಗಟ್ಟೆಗಳಲ್ಲಿ 16,41,156 ಮತದಾರರಿದ್ದಾರೆ. ಮಂಗಳವಾರ ಸುಮಾರು 12 ಲಕ್ಷಕ್ಕೂ ಅಽಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿದೇಶಗಳಿಂದ ಕೆಲವರು ಬಂದು ಮತಚಲಾಯಿಸಿದ್ದು, ವಿಶೇಷ. ಹಳ್ಳಿಯ ಜನರು ನಾಲ್ಕಾರು ಕಿಮೀ ನಡೆದು ಬಂದು, ದೋಣಿಗಳನ್ನು ದಾಟಿ ಬಂದು ಮತದಾನ ಮಾಡಿದರು. ವೃದ್ಧರು, ಮಹಿಳೆಯರು, ಬಿಸಿಲಿನಲ್ಲೂ ಕಷ್ಟಪಟ್ಟು ನಿಂತು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.
ರಾತ್ರಿಯವರೆಗೂ ಮುಂದುವರಿದ ಮತದಾನ:
ರಣ ಬಿಸಿಲಿನ ಪರಿಣಾಮ ಮತದಾರರು ಬೆಳಗ್ಗೆ ಬೇಗನೇ ಮತಗಟ್ಟೆಗಳಿಗೆ ಬಂದು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದವು. ಮತ್ತೆ ಸಾಯಂಕಾಲ 4 ರ ಬಳಿಕ ಮತಗಟ್ಟೆಗಳು ರಶ್ ಆಗಿವೆ. ಸಾಯಂಕಾಲ 6 ಗಂಟೆ ಕಳೆದರೂ ಮತದಾನ ಮುಂದುವರಿದಿತ್ತು. 6 ಗಂಟೆಯ ಒಳಗೆ ಮತಗಟ್ಟೆಯ ಕಂಪೌAಡ್ ಒಳಗೆ ಆಗಮಿಸಿದವರಿಗೆ ಪಿಂಕ್ ಸ್ಲಿಪ್ ನೀಡಿ ಗೇಟ್ ಹಾಕಲಾಯಿತು. ಕೆಲವೆಡೆ 7 ಗಂಟೆಯವರೆಗೂ ಮತದಾಯನ ನಡೆಯಿತು.
46 ಕಡೆ ಯಂತ್ರ ಹಾಳು
ಕಾರವಾರ ಸೇಂಟ್ ಮೈಕಲ್ ಮತಗಟ್ಟೆಯಲ್ಲಿ ವಿವಿ ಪ್ಯಾಟ್, ಇವಿಎಂ ಕೈ ಕೊಟ್ಟು ಸುಮಾರು ಒಂದುವರೆ ತಾಸು ಮತದಾನ ವಿಳಂಬವಾಯಿತು. ಸಂಪೂರ್ಣ ಮತ ಯಂತ್ರದ ಸೆಟ್ ಬದಲಿಸಿ 8 ಗಂಟೆಯ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಕಾರವಾರ ಶಿರವಾಡ, ಬೋಳ ಮತಗಟ್ಟೆಗಳಲ್ಲೂ ಮತ ಯಂತ್ರ ಕೈ ಕೊಟ್ಟಿದ್ದರಿಂದ ಮತದಾನ ವಿಳಂಬವಾಯಿತು. ಒಟ್ಟು ಲೋಕಸಭಾ ಕ್ಷೇತ್ರದ 46 ಕ್ಕೂ ಹೆಚ್ಚು ಕಡೆ ಮತ ಯಂತ್ರ ತೊಂದರೆ ಉಂಟಾಗಿದೆ. ಮತ ಯಂತ್ರ ನಿರ್ವಹಿಸುವ ಬಿಇಎಲ್ ಸಂಸ್ಥೆಯವರು ಸ್ಥಳಕ್ಕೆ ತೆರಳಿ ಮತ ಯಂತ್ರಗಳನ್ನು ಪರಿಶೀಲಿಸಿದ ನಂತರ ಬೇರೆ ಯಂತ್ರಗಳನ್ನು ಅಳವಡಿಸಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವೆಡೆ ಅದೇ ಯಂತ್ರಗಳನ್ನು ರಿಪೇರಿ ಮಾಡಿ, ಮತದಾನಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಮತದಾನದ ವಿಶೇಷ
*ವಿವಿಧೆಡೆ ಗಮನ ಸೆಳೆದ ವಿಶೇಷ ಮತಗಟ್ಟೆಗಳು
*ಎಲ್ಲ ಮತಗಟ್ಟೆಗಳಲ್ಲಿ ಆಶಾ, ಆರೋಗ್ಯ ಕಾರ್ಯಕರ್ತೆಯರ ನಿಯೋಜನೆ
*1015 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ಲೈವ್
ಸಮಯವಾರು ಮತದಾನ ಪ್ರಮಾಣ
ಬೆಳಗ್ಗೆ 9 ಗಂಟೆಗೆ-ಶೇ.11.48
ಬೆಳಗ್ಗೆ 11 ಗಂಟೆಗೆ -ಶೇ.28.19
ಮಧ್ಯಾಹ್ನ 1 ಗಂಟೆಗೆ-ಶೇ.45.08
ಮಧ್ಯಾಹ್ನ 3 ಗಂಟೆಗೆ -ಶೇ.57.05
ಸಾಯಂಕಾಲ 5 ಗಂಟೆಗೆ-ಶೇ.70.61
ಹಿಂದಿನ ಲೋಕಸಭಾ ಚುನಾವಣೆಗಳ ಮತದಾನದ ಪ್ರಮಾಣ
*2019-ಶೇ.74.16 ರಷ್ಟು ಮತದಾನ
*2014-ಶೇ.69.01 ರಷ್ಟು ಮತದಾನ
*2009-ಶೇ.59.09 ರಷ್ಟು ಮತದಾನ
ಮತ ಯಂತ್ರಗಳು ಕೈ ಕೊಟ್ಟರೆ ನಾವೇ ಅದನ್ನು ಬದಲಿಸುವಂತಿಲ್ಲ. ಬಿಇಎಲ್ ಸಂಸ್ಥೆಯ ತಂತ್ರಜ್ಞರು ಆಗಮಿಸಿ ಅದನ್ನು ಪರಿಶೀಲಿಸಬೇಕು. ರಿಪೇರಿಗೆ ಯತ್ನಿಸಬೇಕು. ಅವುಗಳು ಸಮರ್ಪಕವಾಗಿಲ್ಲ ಎಂದು ಪ್ರಮಾಣಪತ್ರ ನೀಡಿದ ಬಳಿಕ ಬೇರೆ ಮತ ಯಂತ್ರವನ್ನು ಅಳವಡಿಸಲಾಗಿದೆ. ಯಂತ್ರಗಳು ಕೈ ಕೊಟ್ಟಿದ್ದು, ಬಿಟ್ಟರೆ ಒಟ್ಟಾರೆ ಶಾಂತಿಯುತ ಮತದಾನವಾಗಿದೆ.ಗಂಗೂಬಾಯಿ ಮಾನಕರ್ಚುನಾವಣಾಧಿಕಾರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ