ಕೆ.ಆರ್.ನಗರ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್ ಮತ್ತು ತಹಸೀಲ್ದಾರ್ ಎಸ್.ಸಂತೋಷ್ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು. ಸೌಮ್ಯಾ ಲೋಕೇಶ್, ಡಾ.ಜಯಣ್ಣ, ಕೋಳಿಪ್ರಕಾಶ್, ಕೆ.ಎನ್.ಬಸಂತ್, ಗಾಯತ್ರಿ, ಕೆ.ಎಲ್.ರಮೇಶ್, ಜಿ.ಪ್ರಕಾಶ್, ಡಾ.ಡಿ.ನಟರಾಜ್, ಸಿ.ಆರ್.ಉದಯಕುಮಾರ್, ಕೆ.ಎಲ್.ಭಾಸ್ಕರ್, ರಾಮಕೃಷ್ಣ ಇದ್ದರು.  
ನ್ಯೂಸ್

ಉತ್ತಮ ಭವಿಷ್ಯಕ್ಕೆ ವೇದಿಕೆಯಾಗಲಿರುವ ಸಾಹಿತ್ಯ ಸಮ್ಮೇಳನ

ಕೆ.ಆರ್.ನಗರ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯುವ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡುವ ವೇದಿಕೆಯಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಿಂಡಿಮಶಂಕರ್ ಹೇಳಿದರು.

ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಮಾತನಾಡಿದ ಅವರು, ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರ ನೇತೃತ್ವದಲ್ಲಿ ಜ. 6, 7, 8ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕೆಂಬ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥ ರಾಜ್ಯಾದ್ಯಂತ ಸಂಚರಿಸಲಿದೆ ಎಂದರು.

ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಆಡಳಿತ ಭಾಷೆಯಾಗಿ ಕನ್ನಡವನ್ನು ನೂರಕ್ಕೆ ನೂರರಷ್ಟು ಜಾರಿಯಾಗಬೇಕು. ಸರ್ಕಾರಿ ಉದ್ಯೋಗ ಹಾಗೂ ಉದ್ಯಮದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದರ ಜತೆಗೆ ಸರೋಜಿನಿ ಮಹರ್ಷಿ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂಬ ಕ್ರಾಂತಿಕಾರಿ ನಿಲುವುಗಳು ಸರ್ಕಾರದ ಮುಂದಿದ್ದು, ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಹಳ್ಳಿಗಳ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಕನ್ನಡದ ತೇರು ಇದೇ ಮೊದಲ ಭಾರಿಗೆ ರಾಜ್ಯಾದ್ಯಂತ ಸಂಚರಿಸುತ್ತಿದೆ ಎಂದರು.

ತಹಸೀಲ್ದಾರ್ ಎಸ್.ಸಂತೋಷ್, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಕಸಾಪ ರಾಜ್ಯ ಸಂಚಾಲಕ ನಬೀ ಸಾಬ್ ಕುಷ್ಠಗಿ ಮಾತನಾಡಿದರು. ಇದಕ್ಕೂ ಮೊದಲು ಮೈಸೂರಿನಿಂದ ಕೆ.ಆರ್.ನಗರ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಶ್ರೀ ತೋಪಮ್ಮ ತಾಯಿ ದೇವಸ್ಥಾನದ ಬಳಿ ಪರಿಷತ್‌ನ ಪದಾಧಿಕಾರಿಗಳು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಮುಖಂಡರು ಕಲಾ ತಂಡಗಳೊಂದಿಗೆ ಬರ ಮಾಡಿಕೊಂಡರು. ನಂತರ ಪಟ್ಟಣದ ಗರುಡುಗಂಬ ವೃತ್ತ, ವಾಣಿ ವಿಲಾಸ ರಸ್ತೆ, ಡಾ.ಬಾಬು ಜಗಜೀವನರಾಮ್ ವೃತ್ತದ ಮೂಲಕ ಮೈಸೂರು-ಹಾಸನ ರಸ್ತೆಯಲ್ಲಿ ಸಂಚರಿಸಿ ತಾಲೂಕಿನ ಹಂಪಾಪುರ, ಹೊಸಗ್ರಹಾರ ಹಾಗೂ ಭೇರ್ಯದಲ್ಲಿ ಸಂಚರಿಸಿ ನಂತರ ಬೀಳ್ಕೊಡಲಾಯಿತು.

ಪುರಸಭಾ ಅಧ್ಯಕ್ಷೆ ಸೌಮ್ಯಾ ಲೋಕೇಶ್, ಸದಸ್ಯ ಕೋಳಿಪ್ರಕಾಶ್, ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಪಂ ಇಒ ಎಚ್.ಕೆ.ಸತೀಶ್, ಟಿಎಸ್‌ಡಬ್ಲ್ಯು ಎಸ್.ಎಂ.ಅಶೋಕ್‌ಕುಮಾರ್, ಬಿಇಒ ಗಾಯತ್ರಿ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಸಾಪ ಗೌರವ ಕೋಶಾಧ್ಯಕ್ಷ ಜಿ.ಪ್ರಕಾಶ್, ತಾಲೂಕು ಗೌರವಾಧ್ಯಕ್ಷ ಡಾ.ಡಿ.ನಟರಾಜ್, ಗೌರವ ಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಕೋಶಾಧ್ಯಕ್ಷ ಕೆ.ಎಲ್.ಭಾಸ್ಕರ್, ಉಪಾಧ್ಯಕ್ಷ ರಾಮಕೃಷ್ಣ, ನಗರ ಉಪಾಧ್ಯಕ್ಷ ಕೃಷ್ಣ, ನಗರ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್, ಸದಸ್ಯರಾದ ಬೇಬಿ ಮಹೇಶ್, ವಂದನಾ, ಸಾಹಿತಿಗಳಾದ ಪ್ರಭಾಕರ್ ಹೆಗ್ಗಂದೂರು, ಭೇರ್ಯ ರಾಮಕುಮಾರ್ ಹಾಜರಿದ್ದರು.