ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಕೇಂದ್ರದಲ್ಲಿ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅವರ ಬುನಾದಿ ತರಬೇತಿಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್‌ಕುಮಾರ್ ಉದ್ಘಾಟಿಸಿದರು. ಡಾ. ವಿಕ್ರಮ್ ಅಮಟೆ, ಪಿ.ಪಾಪಣ್ಣ ಇತರರಿದ್ದರು. 
ನ್ಯೂಸ್

ಉತ್ತಮ ತರಬೇತಿ ವೃತ್ತಿಗೆ ಬುನಾದಿ

ಕಡೂರು: ಪ್ರಶಿಕ್ಷಣಾರ್ಥಿಗಳು ತರಬೇತಿ ಸಮಯದಲ್ಲಿ ಪರಿಪೂರ್ಣತೆ ಪಡೆದುಕೊಂಡರೆ ವೃತ್ತಿಪರ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ತರಬೇತಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್‌ಕುಮಾರ್ ತಿಳಿಸಿದರು.

ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಕೇಂದ್ರದಲ್ಲಿ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅವರ ಬುನಾದಿ ತರಬೇತಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ತರಬೇತಿ ಅವಧಿ ಬದುಕಿನ ಪಾಠದ ಜತೆಗೆ ಶಿಸ್ತು ಹೇಳಿಕೊಡುವ ಉತ್ತಮ ವ್ಯವಸ್ಥೆಯಾಗಿದೆ. ಇದರಲ್ಲಿ ಕಲಿತ ಶಿಕ್ಷಣ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿದೆ ಎಂದರು.

ತರಬೇತಿಯಲ್ಲಿ ಪೊಲೀಸ್ ಇಲಾಖೆಯ ಸಮನ್ವಯ ಕಾಪಾಡಿಕೊಂಡಾಗ ಸ್ಥಳೀಯ ಸಮಸ್ಯೆಗಳು ಅರ್ಥವಾಗುತ್ತದೆ. ಇದರಿಂದ ವಾಸ್ತವ ಚಿತ್ರಣದ ಮಾಹಿತಿ ಸಮರ್ಪಕವಾಗಿ ಸಿಗಲಿದೆ. ಆಧುನಿಕ ಪ್ರಪಂಚದ ವಿದ್ಯಮಾನಗಳ ಬಗ್ಗೆ ಹೆಚ್ಚು ಗಮನಕೊಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳು ತರಬೇತಿ ಕೇಂದ್ರದಲ್ಲಿ ಒಂದಷ್ಟು ಅವಧಿ ಪ್ರಶಿಕ್ಷಣಾರ್ಥಿಗಳಿಗೆ ಸಂವಾದದ ಮೂಲಕ ಮಾಹಿತಿ ನೀಡಿದರೆ ಹೆಚ್ಚು ಪ್ರಯೋಜನವಾಗಲಿದೆ. ಪ್ರತಿ ವಿಷಯವನ್ನೂ ಅರ್ಥ ಮಾಡಿಕೊಂಡು ಅಭ್ಯಾಸ ಮಾಡಿದರೆ ಜ್ಞಾನದ ಮಟ್ಟ ವೃದ್ಧಿಯಾಗಲಿದೆ. ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚು ಮಹತ್ವ ನೀಡಿದಾಗ ಗುರಿ ತಲುಪಲು ಸಾಧ್ಯ. ಸಮಯವನ್ನು ಯಾರೂ ವ್ಯರ್ಥ ಮಾಡದೆ ತರಬೇತಿ ಶಿಕ್ಷಣವನ್ನು ಶ್ರಮದ ಜತೆಗೆ ಅರ್ಥಪೂರ್ಣವಾಗಿ ಕಲಿಯಬೇಕಿದೆ. ಮುಖ್ಯವಾಗಿ ಕಂಪ್ಯೂಟರ್ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ಸೈಬರ್ ಪ್ರಕರಣಗಳ ಬಗ್ಗೆ ನಿಗಾವಹಿಸಲು ಸಾಧ್ಯ ಎಂದರು.

ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ವೇತನ ಸಹಿತ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಔದಾರ್ಯವನ್ನು ನಾವೆಲ್ಲರೂ ಗಮನಿಸಬೇಕಿದೆ ಎಂದರು.

ಮಾದರಿ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಾಯಿತು. ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಪಿ.ಪಾಪಣ್ಣ ತರಬೇತಿ ಕೇಂದ್ರದಲ್ಲಿ 480 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿರುವ ಬಗ್ಗೆ ವರದಿ ನೀಡಿದರು. ಡಿವೈಎಸ್ಪಿ ಹಾಲುಮೂರ್ತಿರಾವ್ ಹಾಗೂ ತರಬೇತಿ ಕೇಂದ್ರದ ಪಿಎಸ್‌ಐಗಳು ಇದ್ದರು.