ಬಾಗಲಕೋಟೆ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಲು ಯೋಗ ಅವಶ್ಯವಾಗಿದೆ. ನಿತ್ಯವು ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಯುಷ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಯೋಗ ಸಂಸ್ಥೆ ಸಹಯೋಗದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ಹಮ್ಮಿಕೊಂಡ ಯೋಗಾಥಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದ ಮಹತ್ವವನ್ನು ತಿಳಿಸುವ ಮೂಲಕ ಗಿನ್ನೀಸ್ ದಾಖಲೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಯೋಗಾಥಾನ್ ಹಮ್ಮಿಕೊಂಡಿರುವುದು ಮಹತ್ವದ ಸಂಗತಿ. ಯೋಗ ದೈಹಿಕ, ಮಾನಸಿಕ ಸಮತೋಲನದ ಜೊತೆಗೆ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಯೋಗ ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಂಶೋಧಕರಿಗೆ ಪ್ರಯೋಜನಕಾರಿಯಾಗಿದೆ. ಯುವಕರು ತಮ್ಮ ನಿತ್ಯ ಜೀವನದಲ್ಲಿ ಯೋಗ ಮಾಡುವದರಿಂದ ಸಾರ್ಥಕತೆಯ ಜೀವನ ಪಡೆಯಬಹುದಾಗಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯುವ ಪೀಳಿಗೆಗಾಗಿಯೇ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಯುವಜಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಸರ್ಕಾರ ಕ್ರೀಡಾಕೂಟಕ್ಕೂ ಹೆಚ್ಚು ಒತ್ತು ನೀಡುತ್ತಿರುವದರಿಂದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಮಾಡುವದರಿಂದ ಕ್ಯಾನ್ಸರ್, ಮಧುಮೇಹ, ಅಕ ರಕ್ತದೊತ್ತಡ, ಹೃದಯ ರೋಗ ಸೇರಿದಂತೆ ಹಲವು ಕಾಯಿಲೆಗಳಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಎನ್.ಐ.ಸಿಯ ಗಿರಿಯಾಚಾರ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವೈದ್ಯಕೀಯ ಆಡಳಿತ ಮಂಡಳಿಯ ಕಾರ್ಯಾದ್ಯಕ್ಷ ಅಶೋಕ ಸಜ್ಜನ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಸೇರಿದಂತೆ ಇತರರು ಉಪಸ್ಥಿತರಿದ್ದರು.