ಹುಣಸೂರು:
ಆರೋಗ್ಯರಹಿತ ಬಾಳು ಎಂದರೆ ಅದು ಬರಡು ಭೂಮಿಯಂತೆ. ಹಾಗಾಗಿ, ಪರಿಪೂರ್ಣ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕೆಂದು ದೈಹಿಕ ಶಿಕ್ಷಣ ವಿಭಾಗದ ಜಿಲ್ಲಾ ಉಪನಿರ್ದೇಶಕ ವೆಂಕಟೇಶಮೂರ್ತಿ ಸಲಹೆ ನೀಡಿದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟನೆಯಲ್ಲಿ ಮಾತನಾಡಿದರು.
ಕ್ರೀಡೆ ಎನ್ನುವುದು ಮನುಷ್ಯನ ಸಂತೋಷದ ಪರಾಕಾಷ್ಠೆಯ ಅಭಿವ್ಯಕ್ತಿಯಾಗಿದೆ. ಕ್ರೀಡೆ ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವ, ಸಮತೋಲನ ತರುವ ಪ್ರಕ್ರಿಯೆ. ನೂತನ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಒಂದು ಗಂಟೆ ಆಟದ ಮೈದಾನದಲ್ಲಿ ಕಾಲ ಕಳೆಯಬೇಕೆನ್ನುವುದನ್ನು ತಿಳಿಸಿದೆ. ಭವಿಷ್ಯದಲ್ಲಿ ಭಾರತದ ಪ್ರಜೆಗಳು ಸದೃಢರಾಗಿರಬೇಕೆನ್ನುವ ಸದುದ್ದೇಶದಿಂದ ಈ ನೀತಿ ಅಳವಡಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಆಯೋಜನೆಯ ಹೊಣೆಯನ್ನು ತಾಲೂಕಿಗೆ ನೀಡುವ ಮೂಲಕ ನಮ್ಮೆಲ್ಲರ ಜವಾಬ್ದಾರಿಯನ್ನು ಇಲಾಖೆ ಹೆಚ್ಚಿಸಿದೆ. ಎಲ್ಲರೂ ಸಂತಸದಿಂದ ಪಂದ್ಯಾವಳಿ ಯಶಸ್ಸಿಯಾಗಿ ನಡೆಸೋಣ ಎಂದು ತಿಳಿಸಿದರು.
ನಗರಸಭಾಧ್ಯಕ್ಷೆ ಗೀತಾ ನಿಂಗರಾಜು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ಟಿ.ರಂಗಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೀಂದ್ರ, ಮಾದಳ್ಳಿಮಠದ ಪ್ರೌಢಶಾಲೆಯ ಆಡಳಿತಾಧಿಕಾರಿ ರುಕ್ಮಿಣಿ ಇದ್ದರು. ಪಂದ್ಯಾವಳಿಯಲ್ಲಿ ಜಿಲ್ಲೆಯ 8 ತಾಲೂಕುಗಳಿಂದ ಒಟ್ಟು 36 ತಂಡಗಳು ಭಾಗವಹಿಸಿದ್ದವು.