ನ್ಯೂಸ್

ಉಡುಪಿಯಲ್ಲಿ 18 ಮಕ್ಕಳು ಸಹಿತ 45 ಮಂದಿ ಗುಣಮುಖರಾಗಿ ಡಿಸ್ಚಾರ್ಜ್. ಮಕ್ಕಳಿಗೆ ಉಡುಗೊರೆ ನೀಡಿದ ಡಿಸಿ.

ಉಡುಪಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತರಾಗಿದ್ದ 45 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ.‌ ಇದರಲ್ಲಿ 18 ಮಕ್ಕಳು ಸೇರಿದ್ದಾರೆ. ದಿನ ಕಳೆದಂತೆ ಏರಿಕೆಯಾಗುತಿದ್ದ ಕರೊನಾ ಪಾಸಿಟಿವ್ ಪ್ರಕರಣಗಳ ನಡುವೆ ಈ ಸುದ್ದಿ ಜನರಲ್ಲಿ ನಿರಾತಂಕ ಭಾವ ಮೂಡಿಸಿದೆ. ಟಿಎಂಎ ಪೈ ಕೋವಿಡ್-19 ವಿಶೇಷ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಶನಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಲಾಗಿದೆ. ಗುಣಮುಖರಾದವರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.‌ಮಕ್ಕಳಿಗ ಡೈರಿ ಮಿಲ್ಕ್ ಚಾಕಲೇಟ್, ಆಟಿಕೆ, ಪೈಟಿಂಗ್ ಕಿಟ್ ಉಳ್ಳ ಉಡುಗೊರೆಯನ್ನು ಜಿಲ್ಲಾಧಿಕಾರಿಜಿ.ಜಗದೀಶ್ ನೀಡಿದರು. ಇದರಲ್ಲಿ ಹೆಚ್ಚಿನವರು ಮಹಾರಾಷ್ಟ್ರದಿಂದ ಬಂದವರಾಗಿದ್ದು, ದುಬೈ ಮತ್ತು ತೆಲಂಗಾಣದಿಂದ ಬಂದವರು ಇದ್ದಾರೆ. ಅನ್ಯ ರಾಜ್ಯ ಮತ್ತು ವಿದೇಶದವರು ಆಗಮಿಸಿದ ಬಳಿಕ ಜಿಲ್ಲೆಗೆ ಕರೊನಾ ಮರ್ಮಘಾತ ನೀಡಿತ್ತು. ಆರಂಭದಲ್ಲಿ ಮೂರು ಪಾಸಿಟಿವ್ ಪತ್ತೆಯಾಗಿ, ಪಾಸಿಟಿವ್ ವ್ಯಕ್ತಿಗಳು ಗುಣಮುಖರಾಗಿ ಡಿಸ್ ಚಾರ್ಜ್ ಆದ ಮೇಲೂ ಕೆಲವು ದಿನ ಜಿಲ್ಲೆಯಲ್ಲಿ ಪ್ರಕರಣ ಪತ್ತೆಯಾಗಿರಲಿಲ್ಲ. ವಿದೇಶ, ಹೊರ ರಾಜ್ಯದವರು ಆಗಮಿಸಿದ ಬಳಿಕ ಇದೀಗ ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ‌. ಇನ್ನೂ ಆರು ಸಾವಿರಕ್ಕೂ ಅಧಿಕ ಮಂದಿಯ ವರದಿ ಬರಲು ಬಾಕಿ ಇದೆ.