ಉಡುಪಿ: ನಗರದ ಹೊರ ವಲಯ ಸಂತೆಕಟ್ಟೆಯಲ್ಲಿರುವ ರೋಬೋ ಸಾಫ್ಟ್ ಕಂಪೆನಿಯಲ್ಲಿ ಶುಕ್ರವಾರ ತಡ ರಾತ್ರಿ ಅಗ್ನಿ ದುರಂತ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಅಗ್ನಿಶಾಮಕ ದಳದ ಮುಖ್ಯಧಿಕಾರಿ ತಿಪ್ಪೆಸ್ವಾಮಿ ಜಿ. ನೇತೃತ್ವದಲ್ಲಿ ಹದಿನೈದು ಸಿಬಂದಿ ಒಂದುವರೆ ತಾಸು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಕಿ ಕಾಣಿಸಿಕೊಂಡ ಸ್ಥಳವು ಮುಖ್ಯ ಸರ್ವರ್ ಕೊಠಡಿಯಾದ್ದರಿಂದ ಲಕ್ಷಾಂತರ ಮೌಲ್ಯದ ಕಂಪ್ಯೂಟರ್, ಪಿಠೋಪಕರಣ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದರಿಂದ ಕಟ್ಟಡವಿಡಿ ಹೊಗೆಯಿಂದ ಬೆಳಿಗ್ಗೆ ತನಕ ತುಂಬಿತ್ತು ಎಂದು ತಿಳಿದು ಬಂದಿದೆ.
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಾಫ್ಟ್‌ವೇರ್ ಕಂಪೆನಿಯ ತಳ ಮಹಡಿಯ ವಿದ್ಯುತ್ ಶಾರ್ಟ್ ನಿಂದ ರಾತ್ರಿ 12.45ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಭದ್ರತಾ ಸಿಬಂದಿಗಳು ಉಡುಪಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಸಾಫ್ಟ್‌ವೇರ್ ಸಿಬಂದಿಗೆ ವರ್ಕ್ ಫ್ರಮ್ ಹೋಮ್ ಇರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳ ಅಧಿಕಾರಿಗಳು ತಿಳಿಸಿದ್ದಾರೆ