ನ್ಯೂಸ್

ಈ ಬಾರಿ ಪಿಯು ಪಠ್ಯಕ್ರಮ ಶೇ.30 ಕಡಿಮೆ!

ಈ ಬಾರಿ ಪಿಯು ಪಠ್ಯಕ್ರಮ ಶೇ.30 ಕಡಿಮೆ!

  • ಬೆಂಗಳೂರು
    ಶೈಕ್ಷಣಿಕ ವರ್ಷ ಆರಂಭವಾಗುವುದು ವಿಳಂಬವಾಗಿರುವುದರಿಂದ ಈ ಬಾರಿ ಶೈಕ್ಷಣಿಕ ಅವಧಿ ಕೂಡ ಕಡಿಮೆ ಲಭ್ಯವಾಗುವುದನ್ನು ಮನಗಂಡು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುನಲ್ಲಿ ಶೇ.30 ಪಠ್ಯಕ್ರಮ(ಸಿಲಿಬಸ್) ಕಡಿತಕ್ಕೆ ಮುಂದಾಗಿದೆ.
    2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವುದು ವಿಳಂಬವಾಗುವುದರಿಂದ ಈಗಾಗಲೇ ಶಿಕ್ಷಣ ಇಲಾಖೆಯು ಆನ್‌ಲೈನ್‌ನಲ್ಲಿ ತರಗತಿಗಳನ್ನು ಆರಂಭಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘವು ಪ್ರಾಥಮಿಕ ಮತ್ತು ಪ್ರೌಢ ತರಗತಿಯ ಶೇ.30 ಪಠ್ಯವನ್ನು ಕಡಿತ ಮಾಡಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ನೀಡಿದೆ.
    ಇದೇ ಮಾದರಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಹ ಶೇ.30 ಪಠ್ಯವನ್ನು ಕಡಿತ ಮಾಡಿ ಪ್ರಸ್ತಾವನೆ ರೂಪದಲ್ಲಿ ಸರ್ಕಾರದ ಒಪ್ಪಿಗೆ ಪಡೆಯಲು ಕಳುಹಿಸಿದೆ. ಆದರೆ, ಈವರೆಗೆ ಶಿಕ್ಷಣ ಇಲಾಖೆಯಿಂದ ಪಠ್ಯ ಕಡಿತಕ್ಕೆ ಅನುಮೋದನೆ ಸಿಕ್ಕಿಲ್ಲ.
    ಈ ಬಾರಿ ಶಾಲಾ-ಕಾಲೇಜು ಆರಂಭವಾಗುವುದು ಅನಿಶ್ಚಿತತೆಯಿಂದ ಕೂಡಿರುವುದರಿಂದ ಎಷ್ಟು ಶೈಕ್ಷಣಿಕ ಅವಧಿಗಳು ದೊರೆಯುತ್ತವೆ? ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಆದರೆ, ಸೆಪ್ಟಂಬರ್ ಅಥವಾ ಅಕ್ಟೋಬರ್ ಅವಧಿಗೆ ಶಾಲಾ-ಕಾಲೇಜು ಅರಂಭ ಮಾಡಿದರೆ, ಎಷ್ಟು ಪಠ್ಯ ಬೋಧನೆ ಮಾಡಬೇಕಾಗುತ್ತದೆ? ಎಂಬ ಲೆಕ್ಕಚಾರದ ಮೇಲೆ ಶೇ.30 ಪಠ್ಯ ಕಡಿತ ಮಾಡಿದೆ.
    ಪದವಿಗಳ ಕತೆ ಏನು?: ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರಮೋಟ್ ಮಾಡಿದ್ದು, ವಿವಿಗಳು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ನೀಡುವ ಸೂಚನೆ ಮತ್ತು ಮಾರ್ಗಸೂಚಿಗಾಗಿ ಕಾಯುತ್ತಿವೆ. ಎಷ್ಟು ಪ್ರಮಾಣದಲ್ಲಿ ಪಠ್ಯಕ್ರಮ ಕಡಿತ ಮಾಡಬೇಕೆಂಬ ಬಗ್ಗೆ ಆಲೋಚನೆ ಮಾಡಿಲ್ಲ. ಯುಜಿಸಿ ನಿಯಮದ ಅನುಸಾರ ವಿವಿಗಳು ನಡೆದುಕೊಳ್ಳಬೇಕಾಗುತ್ತದೆ. ಆನಂತರ ರಾಜ್ಯದ ಹಂತದಲ್ಲಿ ಕೆಲವು ಸೂಚನೆಗಳಿಗೆ ತಿದ್ದುಪಡಿ ತಂದು ಪಾಲನೆ ಮಾಡುವಂತೆ ವಿವಿಗಳಿಗೆ ಸೂಚನೆ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆರ್.ಸ್ನೇಹಲ್ , ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ

ಶೇ.30 ಪಠ್ಯಕ್ರಮ ಕಡಿಮೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಕೋಟ್…