ನ್ಯೂಸ್

ಇಸ್ವ ಆಂಪಿಯರ್ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ- ಸೇವಾ ಮಳಿಗೆ ಆರಂಭ

ಮಂಗಳೂರು: ಆಂಪಿಯರ್ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವಾ ಮಳಿಗೆ ಇಸ್ವ  ಮೋಟಾರ್ಸ್‌ ನಗರದ ಬಿಜೈ ಕಾಪಿಕಾಡ್‌ನ ಓಶಿಯನ್ ಪರ್ಲ್ ಹೋಟೆಲ್‌ನ ಮುಂಭಾಗದಲ್ಲಿರುವ ಲೋಟಸ್ ಆದಿತ್ಯಾ ಕಟ್ಟಡದಲ್ಲಿ ಗುರುವಾರ ಆರಂಭಗೊಂಡಿತು.
 ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು  ಅವರು, ನೇರ ದಾರಿ, ಪ್ರಾಮಾಣಿಕತೆ, ಪರಿಶ್ರಮ, ಜ್ಞಾನದಿಂದ ಉದ್ಯಮದಲ್ಲಿ ಹೇಗೆ ಅಭಿವೃದ್ಧಿ ಕಾಣಬಹುದು ಎನ್ನುವುದಕ್ಕೆ ಸಾಂಬ ಶಿವರಾವ್ ಅವರು ಓರ್ವ ಉತ್ತಮ ಮಾದರಿಯಾಗಿದ್ದಾರೆ. ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅವರು ನೈತಿಕ ಮೌಲ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅವರು ಉದ್ಯಮದಲ್ಲಿ ಇನ್ನಷ್ಟು ಪ್ರಗತಿ ಕಾಣಲಿ ಎಂದು ಹಾರೈಸಿದರು.
ಖ್ಯಾತ ಚಲನಚಿತ್ರ ನಟ, ನಿರ್ದೇಶಕ ತನಿಕೆಲ್ಲ ಭರಣಿ ಮಾತನಾಡಿ, ಇಲೆಕ್ಟ್ರಿಕಲ್ ವಾಹನಗಳು ಪರಿಸರಕ್ಕೆ ಪೂರಕವಾಗಿರುವಂತದ್ದು, ಮಾಲಿನ್ಯಕ್ಕೆ ಎಡೆ ಮಾಡಿಕೊಡದೇ ಭವಿಷ್ಯದಲ್ಲಿ ಬೇಡಿಕೆ ವಾಹನಗಳಾಗಿ ಗ್ರಾಹಕರಿಗೆ ಮೋಡಿ ಮಾಡಲಿದೆ. ಈ ಉದ್ಯಮ ಪ್ರತಿದಿನ ಪ್ರತಿಕ್ಷಣ  ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕಲಿ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಗತ್ತು ವೇಗವಾಗಿ ಬೆಳೆಯುತ್ತಿರುವಾಗ ಪೆಟ್ರೋಲ್, ಡೀಸೆಲ್ ಬದಲು ಬ್ಯಾಟರಿ ಚಾಲಿತ ಇಲೆಕ್ಟ್ರಿಕಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ  ಸೇರಿದಂತೆ ಸಾಮಾನ್ಯರಿಗೂ ಉಪಯುಕ್ತವಾದ ವಾಹನವಾಗಲಿದೆ. ರಿವರ್ಸ್ ಗೇರ್ ಜತೆಯಲ್ಲಿ ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚು ಓಡುವ ವಾಹನಗಳು ಇಂದಿನ ಅಗತ್ಯತೆಯಲ್ಲಿ ಒಂದಾಗಿದೆ ಎಂದರು.
ಈ ಸಂದರ್ಭ ಅನಘ ರಿೈನರೀಸ್‌ನ ಮುಖ್ಯಸ್ಥ ನದೆಳ್ಳ ಸಾಂಬ ಶಿವರಾವ್ ಹಾಗೂ ಅವರ ಪುತ್ರರಾದ ವೆಂಕಟ್ ಪಣಿ ನದೆಳ್ಳ , ನಾಗಾ ವೆಂಕಟ ಶಿವು ಅವರ ಕುಟುಂಬ ವರ್ಗ, ಆಂಪಿಯರ್ ಡೀಲರ್ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಅನಿನ್‌ದ್ಯ ಮಿತ್ರಾ, ವಲಯ ಮಾರಾಟ ಮುಖ್ಯಸ್ಥ ಪ್ರಾಣೇಶ್ ಎಸ್., ವಲಯ ಮಾರಾಟ ಮುಖ್ಯಸ್ಥ ಇಂದ್ರನೀಲ್ ದತ್ತಾ ಸೇರಿದಂತೆ ನಾನಾ ಮಂದಿ ಉಪಸ್ಥಿತರಿದ್ದರು. ಸಭಾ ಕಾರ‌್ಯಕ್ರಮದ ಬಳಿಕ  ಮೊದಲ ಗ್ರಾಹಕರಿಗೆ ವಾಹನದ ಕೀಲಿ ಕೈಯನ್ನು ಹಸ್ತಾಂತರ ಮಾಡಲಾಯಿತು. ಕಾರ‌್ಯಕ್ರಮವನ್ನು ಸೌಜನ್ಯಾ ಹೆಗ್ಡೆ ನಿರೂಪಿಸಿದರು.