ಬಾಳೆಹೊನ್ನೂರು: ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದ ಇಮ್ತಿಯಾಜ್ ಸುಲ್ತಾನ್ ಅವರ ಸಾಧನೆ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ತಾಲೂಕು ಕಜಾಪ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು. ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಅತ್ಯುತ್ತಮ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸಂಗೀತ ಪ್ರತಿಯೊಬ್ಬರ ಜೀವನಾಡಿ. ಸಂಗೀತವನ್ನು ಮೆಚ್ಚದವರು ಯಾರೂ ಇಲ್ಲ. ಸಂಗೀತ ಹಲವರ ನೋವನ್ನು ಮರೆಯಿಸಿ ಜೀವನದಲ್ಲಿ ನೆಮ್ಮದಿ, ಶಾಂತಿ ನೀಡುತ್ತದೆ. ಸಂಗೀತಕ್ಕೆ ವಿಶಿಷ್ಟ ಶಕ್ತಿಯಿದ್ದು ಸಂಗೀತ ರಚನೆ ಮಾಡುವ ನಿರ್ದೇಶಕರ ಭಾವಗಳು ಪ್ರಮುಖವಾಗಿರುತ್ತವೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಇಮ್ತಿಯಾಜ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ಸಂಗೀತ ಅಭಿಮಾನಿಯೂ ಅವರ ಸಾಧನೆ ಮೆಚ್ಚಬೇಕಿದೆ. ಮುಂದಿನ ದಿನಗಳಲ್ಲಿ ಇಮ್ತಿಯಾಜ್ ಅವರು ಇನ್ನಷ್ಟು ಸಂಗೀತ ರಚನೆ ಮಾಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಇಮ್ತಿಯಾಜ್ ಸುಲ್ತಾನ್ ಮಾತನಾಡಿ, ಹೃದಯಶಿವ ನಿರ್ದೇಶನದ ಬಿಸಿಲು ಕುದುರೆ ಅತ್ಯುತ್ತಮ ಚಿತ್ರವಾಗಿದ್ದು ಇದರಲ್ಲಿ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ ಎಂದರು.
ಜೇಸಿ ಕಾರ್ಯದರ್ಶಿ ವಿ.ಅಶೋಕ, ಪೂರ್ವಾಧ್ಯಕ್ಷರಾದ ಸೈಯದ್ ಫಾಜಿಲ್ ಹುಸೇನ್, ಚೈತನ್ಯ ವೆಂಕಿ, ಸುರೇಂದ್ರ ಮಾಸ್ತರ್, ಎ.ಆರ್.ಸುರೇಂದ್ರ, ರಿಚರ್ಡ್ ಮಥಾಯಿಸ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್, ಜೇಸಿ ಸದಸ್ಯರಾದ ಕೆ.ಎಂ.ರಾಘವೇಂದ್ರ, ಚೇತನ್‌ಕುಮಾರ್, ಶಾಹಿದ್ ಮತ್ತಿತರರಿದ್ದರು.