ಬೆಂಗಳೂರು:
ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದಲ್ಲಿ ಬಂಧಿತರಾದವರ ಪೈಕಿ ಇಬ್ಬರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿ ನಗರದ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯನ್ನು ಸದ್ಯದಲ್ಲೇ ವಿಚಾರಣೆ ನಡೆಸಲಾಗುವುದು. ಶುಕ್ರವಾರ ಪೇಜ್-3 ಪಾರ್ಟಿ ಆಯೋಜಕ ವಿರೇನ್ ಖನ್ನಾ, ರಾಹುಲ್ ತೋನ್ಸೆ ಮತ್ತು ಜಯನಗರ ಆರ್‌ಟಿಒ ಕಚೇರಿ ನೌಕರ ರವಿಶಂಕರ್ ಪೈಕಿ ಇಬ್ಬರನ್ನು ವಿಚಾರಣೆ ನಡೆಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.