ಮೂಡಿಗೆರೆ: ರಂಜಾನ್ ತಿಂಗಳಲ್ಲಿ 30 ದಿನ ಉಪವಾಸ ಆಚರಿಸುವ ವ್ರತದಾರಿಗಳಿಗೆ ಇಫ್ತಾರ್ ಕೂಟದ ಮೂಲಕ ಹಣ್ಣು, ಪಾನಕ, ಆಹಾರ ನೀಡಿದರೆ ಅಂತವರಿಗೆ ಭೂಲೋಕ ಹಾಗೂ ಪರಲೋಕದಲ್ಲಿ ಯಶಸ್ಸು ಸಿಗಲಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಮುಸ್ತಾಫಾ ಯಮಾನಿ ಹೇಳಿದರು.
ಮದರಸಾದ ಹಳೆ ವಿದ್ಯಾರ್ಥಿಗಳು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಭಾನುವಾರ ಏರ್ಪಡಿಸಿದ್ದ ಇಫ್ತಾರ್‌ಕೂಟದಲ್ಲಿ ಮಾತನಾಡಿ, ರಂಜಾನ್ ಅಗಾಧವಾದ ಪುಣ್ಯ ಸಂಪಾದನೆ ಮಾಡುವ ಮಾಸವಾಗಿದೆ. ದಾನ, ಧರ್ಮ ನೀಡುವ ಮೂಲಕ ರಂಜಾನ್ ತಿಂಗಳನ್ನು ವಿನೂತನ ರೀತಿಯಲ್ಲಿ ಆಚರಿಸಲಾಗುತ್ತದೆ. ಇಫ್ತಾರ್‌ಕೂಟದಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ. ವಿವಿಧ ಧರ್ಮಿಯರನ್ನು ಆಹ್ವಾನಿಸಿ ಅವರಿಗೂ ಗೌರವ ಸಲ್ಲಿಸುವುದು ಹಿಂದಿನಿಂದಲೂ ಬೆಳೆದು ಬಂದ ಪದ್ಧತಿಯಾಗಿದೆ. ಇಂತಹ ಪರಂಪರೆಯನ್ನು ಯಾರೊಬ್ಬರೂ ಕೈ ಬಿಡಬಾರದೆಂಬ ಉದ್ದೇಶದಿಂದ ಮದರಸಾದ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಇದರಿಂದ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಎ.ಎಂ.ಶರೀಫ್, ಕಾರ್ಯದರ್ಶಿ ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಎಂ.ಎಸ್.ಇಬ್ರಾಹಿಂ, ಪಿ.ಕೆ.ಹಂಝ, ಫಿಶ್ ಮೋಣು, ಹಳೆ ವಿದ್ಯಾರ್ಥಿಗಳಾದ ಸಿನಾನ್ ಝೀಯಾ, ಅಜೀಜ್, ಯಾಕೂಬ್, ಹನೀಫ್, ಸಲೀಂ, ಆಶ್ರಫ್, ಇರ್ಫಾನ್, ಸಹಲ್, ಅನಸ್, ರಫೀಕ್, ಸದರ್ ಇತರರಿದ್ದರು.