ನ್ಯೂಸ್

ಇನ್‌ಸ್ಪೆಕ್ಟರ್ ವಿರುದ್ಧ ಸಿಬ್ಬಂದಿಗಳಿಂದಲೇ ಜಂಟಿ ಆಯುಕ್ತರಿಗೆ ದೂರು?

ಬೆಂಗಳೂರು: ಠಾಣಾಧಿಕಾರಿ ರಾಘವೇಂದ್ರ ಬಾಬು ಅವರು ಅವಾಚ್ಯವಾಗಿ ನಿಂದಿಸಿ, ಮಾನಸಿಕ ಹಿಂಸೆ  ನೀಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಯ ಸಹೋದ್ಯೋಗಿಗಳು ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಇನ್‌ಸ್ಪೆಕ್ಟರ್ ರಾಘವೇಂದ್ರ ಬಾಬು ಅವರು ಜನವರಿ 18ರಂದು ಕೊಡಿಗೇಹಳ್ಳಿ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಮುಖ್ಯಪೇದೆಯೊಬ್ಬರ ಚಾಡಿ ಮಾತನ್ನು ಕೇಳಿಕೊಂಡು ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕರೆಯುತ್ತಾರೆ. ಠಾಣೆಗೆ ಬರುವ ದೂರುದಾರರಿಗೂ ಭೀತಿ ಹುಟ್ಟಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಮುಖ್ಯಪೇದೆ ರಂಗದಾಮಯ್ಯ ಅವರು ಕುಮ್ಮಕ್ಕು ನಡೆಸುತ್ತ ಕಳೆದ ನಾಲ್ಕು ವರ್ಷಗಳಿಂದ ತನಿಖಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಸಿಬ್ಬಂದಿಗೆ ಅವಕಾಶ ನೀಡುತ್ತಿಲ್ಲ. ಇದೇ ಕಾರಣದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ಭ್ರಷ್ಟಚಾರದ ಕೂಪವಾಗಿದೆ.

ಠಾಣೆಯ ಕೆಲ ಸಿಬ್ಬಂದಿಗಳು ಕಳೆದ ಮೂರು ವರ್ಷಗಳಿಂದ ಹೋಯ್ಸಳ ವಾಹನ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ. ಇವರು ಠಾಣಾಧಿಕಾರಿಗೆ ಹಣ ಮಾಡಿಕೊಡುತ್ತಿರುವುದರಿಂದ ಬದಲಾವಣೆ ಮಾಡುತ್ತಿಲ್ಲ. ಠಾಣಾಧಿಕಾರಿ ರಾಘವೇಂದ್ರ ಬಾಬು ಅವರು ಸಿಬ್ಬಂದಿ ಜತೆ ಸೌಜನ್ಯಯುತವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಬೇಕು. ಮುಖ್ಯಪೇದೆ 8597, 8137 ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.