ನ್ಯೂಸ್

ಇನ್ಮುಂದೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯುಗಾಂತ್ಯ

ಸರ್ಕಾರದ ಅಧಿಸೂಚನೆ ಅನ್ವಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಯುಗಾಂತ್ಯವಾಗಿದ್ದು, ಇನ್ಮುಂದೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)ವಾಗಿ ಕಾರ್ಯನಿರ್ವಹಿಸಲಿದೆ. ಶುಕ್ರವಾರದಿಂದಲೇ ಆದೇಶ ಜಾರಿಯಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯದ ಗಮನ ಸೆಳೆದಿದ್ದ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’ದಲ್ಲಿನ ರಾಜಕೀಯ ಚಟುವಟಿಕೆಗಳಿಗೆ ಈಗ ಕಡಿವಾಣ ಬಿದ್ದಿದೆ. ಮುಡಾ ನಿವೇಶನ ಹಗರಣದ ವಿವಾದದ ಸದ್ದು ಮಾಡಿದ ಬಳಿಕ ಸರ್ಕಾರ, ಮುಡಾದ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಲು ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024’ ಅನುಮೋದಿಸಿತ್ತು. ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದರು. ಇದೀಗ ಮುಡಾ ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ ಆಗಿದೆ. ನಗರವನ್ನು ಯೋಜನಾಬದ್ಧವಾಗಿ ಬೆಳೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಗರ ಅಭಿವೃದ್ಧಿ ಟ್ರಸ್ಟ್ ಬೋರ್ಡ್ (ಸಿಐಟಿಬಿ) ವಿಶ್ವಸ್ಥ ಮಂಡಳಿಯನ್ನು ರಚಿಸಿದ್ದರು. ಅದರ ಮೂಲಕ ನಗರದ ಬಡಾವಣೆಗಳ ರಚನೆ, ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾರ್ಯ ನಡೆಸಲಾಗುತ್ತಿತ್ತು. ಸ್ವಾತಂತ್ರೃ ನಂತರ ವಿಶ್ವಸ್ಥ ಮಂಡಳಿ ಅಸ್ತಿತ್ವದಲ್ಲಿ ನಡೆದುಕೊಂಡು ಬಂದಿತ್ತು. ಆದರೆ 1987ರಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಜಾರಿಗೊಂಡಿತು. ಅದರಂತೆ 1988ರ ಮೇ 16ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರಚನೆಗೊಂಡಿತು. ಇದಾಗಿ 37 ವರ್ಷದ ಬಳಿಕ ಮೇ 23 ರಿಂದ ಎಂಡಿಎ ಕಾರ್ಯ ರೂಪಕ್ಕೆ ಬಂದಿದೆ. ಪ್ರಾಧಿಕಾರದಲ್ಲಿ ಒಬ್ಬ ಅಧ್ಯಕ್ಷ, ಲೆಕ್ಕ ಪರಿಶೋಧನೆಯಲ್ಲಿ ಅನುಭವ ಇರುವ ಅಧಿಕಾರಿ, ಮುಖ್ಯ ಇಂಜಿನಿಯರ್ ದರ್ಜೆಯ ಅಧಿಕಾರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಪರ ನಿರ್ದೇಶಕರ ದರ್ಜೆಯ ಅಧಿಕಾರಿ, ಒಬ್ಬ ವಾಸ್ತುಶಿಲ್ಪಿ ಸದಸ್ಯರಾಗಿರುತ್ತಾರೆ. ಮೈಸೂರು ಮಹಾ ನಗರಪಾಲಿಕೆ ಆಯುಕ್ತರು, ಸರ್ಕಾರದ ಉಪ ಕಾರ್ಯದರ್ಶಿ, ರಾಜ್ಯ ವಿಧಾನ ಮಂಡಲದ ಒಬ್ಬರು, ಒಬ್ಬ ಮಹಿಳೆ, ಕರ್ನಾಟಕ ನಗರ ನೀರು ಪ್ರಾಧಿಕಾರದ ಕಾರ್ಯದರ್ಶಿ, ವಿದ್ಯುತ್ ಸರಬರಾಜು ಕಂಪನಿಯ ಒಬ್ಬ ಪ್ರತಿನಿಧಿ, ಎಂಡಿಎ ಆಯುಕ್ತ, ಪ್ರಾಧಿಕಾರದ ಕಾರ್ಯದರ್ಶಿ ಪದನಿಮಿತ್ತ ಸದಸ್ಯರಾಗಿರುತ್ತಾರೆ. ವಾಸ್ತುಶಿಲ್ಪದಲ್ಲಿ ಅನುಭವವಿರುವ ವ್ಯಕ್ತಿಯು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರಾಭಿವೃದ್ಧಿ ಇಲಾಖೆ ಸಚಿವಾಲಯದ ಅಧಿಕಾರಿ, ವಿಧಾನಮಂಡಲದ ಸದಸ್ಯ, ಮಹಿಳೆ ಸೇರಿದಂತೆ ನಾಲ್ವರನ್ನು ಸರ್ಕಾರವೇ ನೇಮಿಸಲಿದೆ.

ಸರ್ಕಾರದ ಆದೇಶಗಳಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ವಿಘಟಿತಗೊಂಡು, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮೇ 23 ರಿಂದ ಜಾರಿಗೆ ಬಂದಿರುತ್ತದೆ. ಇನ್ಮುಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇರುವುದಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತದೆ. ರಘುನಂದನ್ ಆಯುಕ್ತ, ಮೈಸೂರು ಅಭಿವೃದ್ಧಿ ಪ್ರಾಧಿಕಾರ