ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ್ಯದೊರೆತು 78 ವರ್ಷಗಳಾಗಿದ್ದರೂ ದಲಿತರು,ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರ ಬದುಕಿನ್ನೂ ಸುಧಾ ರಣೆಯಾಗಿಲ್ಲ ಎಂದು ಆಲ್‌ಇಂಡಿಯಾ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ನವ ಕರ್ನಾಟಕ ನಿರ್ಮಾಣ ಆಂದೋಲನ ಜಿಲ್ಲಾ ಘಟಕ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಉದ್ಘಾಟಿಸಿ ಮಾತನಾಡಿದರು.
ಪರಸ್ಪರ ಆಪಾದನೆಗಳನ್ನು ಮಾಡಿಕೊಂಡು ಎಲ್ಲ ಪಕ್ಷಗಳು ಕಾಲ ಕಳೆಯುತ್ತಿವೆ. ಬಡವರ ಸ್ವಾಭಿಮಾನದ ಬದುಕಿಗೆ ಅಗತ್ಯವಿರುವುದನ್ನು ಕೊಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರೆಂಟಿಗಳನ್ನು ನೀಡಿ ಜನರನ್ನು ಯಾಮಾರಿಸುತ್ತಿದ್ದಾರೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬೇರೆ, ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ದಲಿತರ ಮೇಲೆ ದೌರ್ಜನ್ಯಗಳು ಜಾಸ್ತಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಅನಾದಿಕಾಲದಿಂದಲೂ ಜೀವನೋಪಾಯಕ್ಕೆ ಭೂ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಹಕ್ಕುಪತ್ರ ಸಿಗುತ್ತಿಲ್ಲ. 33 ಸಾವಿರ ಹಳ್ಳಿಗಳ ಪೈಕಿ 11 ಸಾವಿರ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲ. ಮತದಾರರಿಗೆ ಆಸೆ, ಆಮಿಷಗಳನ್ನು ತೋರಿಸಿ ಗೆದ್ದು ಹೋದವರು ಯಾರ ಕೈಗೂ ಸಿಗುತ್ತಿಲ್ಲ. ಅದಕ್ಕಾಗಿ ದಲಿತ ಸಂಘಟನೆಗಳು, ರೈತರು, ಹೋರಾಟಗಾರರು, ಮಹಿಳೆಯರು, ವಿದ್ಯಾರ್ಥಿಗಳು ಎಲ್ಲರೂ ಒಗ್ಗೂಡಿ ಪರ್ಯಾಯ ಪಕ್ಷ ಅಧಿಕಾರಕ್ಕೆ ತರಲು ಕೈಜೋಡಿಸಬೇಕಿದೆ ಎಂದರು.
ರಾಜ್ಯರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಗ್ಯಾರೆಂಟಿಗಳಿಂದಾಗಿ ಸರ್ಕಾರ ದಿವಾಳಿಯಾಗುತ್ತಿದೆ. ಜನರ ಆಶೋತ್ತರಗಳಿಗೆ ಉತ್ತರ ಕೊಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿ, ಹಳ್ಳಿಗೆ ತೆರಳಿ ಜನರನ್ನು ಜಾಗೃತಿಗೊಳಿಸಬೇಕಿದೆ. ಪ್ರತಿಪಕ್ಷಗಳು ನಿತ್ರಾಣಗೊಂಡಿರುವುದರಿಂದ ಆಡಳಿತ ಪಕ್ಷದ ಅಕ್ರಮಗಳನ್ನು ಪ್ರಶ್ನಿಸಲು ಆಗುತ್ತಿಲ್ಲವೆಂದು ಟೀಕಿಸಿದರು.
ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ ಮಾತನಾಡಿ,ಗಾಂಧಿ ಯುಗ ಮುಗಿದ್ದಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಯುಗ ಆರಂಭಗೊಂಡಿದೆ. ಎಲ್ಲ ಸಂಘಟನೆಗಳು ಒಂದಾಗಿ ಹಳ್ಳಿ, ಹಳ್ಳಿಗೆ ತಿರುಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕುತಂತ್ರಗಳನ್ನು ಜನರಿಗೆ ತಿಳಿಸಬೇಕಿದೆ. 12 ಕೋಟಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 9 ಕೋಟಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. 30 ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಪರ್ಯಾಯ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮಾಜಿ ಶಾಸಕ ಎಚ್.ಡಿ. ಬಸವರಾಜ್ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಟ್ಟಹಾಸ ಮಿತಿ ಮೀರಿದೆ. ಜನರಿಂದ ಮತ ಪಡೆದು ವಂಚಿಸುತ್ತಿರುವವರನ್ನು ಒದ್ದು ಓಡಿಸಬೇಕಾಗಿದೆ. ಪರ್ಯಾಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದರು.
ಆಲ್‌ಇಂಡಿಯಾ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ. ಗೋಪಿನಾಥ್ ಮಾತನಾಡಿ, ದಲಿತರು, ಹಿಂದುಳಿದವರು, ಅಸ್ಪಶ್ಯರು, ಹೋರಾಟಗಾರರ ಮೇಲೆ ದೌರ್ಜನ್ಯಗಳಾಗುತ್ತಿವೆ. ನಿರುದ್ಯೋಗ ಜಾಸ್ತಿಯಾಗಿದೆ. ರೈತರ ಆತ್ಮಹತ್ಯೆ ನಿಂತಿಲ್ಲ. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗೆ ಹೊಸ ಶಕ್ತಿ ಅಧಿಕಾರಕ್ಕೆ ಬರಬೇಕಿದೆ ಎಂದು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಉದಾಹರಿಸಿದರು.
ಆಲ್ ಇಂಡಿಯಾ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯಕಾರ್ಯದರ್ಶಿಗಳಾದ ದೊಡ್ಡೆಟ್ಟಪ್ಪ, ನವೀದ್, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್, ಮಹಾಂತೇಶ್ ಕೂನಬೇವು, ಭೀಮನಕೆರೆ ಶಿವಮೂರ್ತಿ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡುಳ್ಳಾರ್ತಿ ಕರಿಯಣ್ಣ, ಶ್ರೀನಿವಾಸ್ ಮತ್ತಿತರರು ಇದ್ದರು.