ನ್ಯೂಸ್

ಇಆರ್‌ಎಸ್‌ಎಸ್ ಸಿಬ್ಬಂದಿಗೆ ಆರ್ಮ್ಸ್

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಬೀದರ್ ಎಟಿಎಂ ಹಣ ದರೋಡೆ, ಹತ್ಯೆ ಪ್ರಕರಣ, ಮಂಗಳೂರಲ್ಲಿ ಬ್ಯಾಂಕ್ ದರೋಡೆ ಇತ್ಯಾದಿ ಅಪರಾಧ ಕೃತ್ಯಗಳ ಬೆನ್ನಲ್ಲೇ ಇಆರ್‌ಎಸ್‌ಎಸ್ (Emer gency Response Support System )ಸಿಬ್ಬಂದಿಗೆ ಶಸ್ತ್ರಾಸ್ತ್ರ ಒದಗಿಸಲು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಮತ್ತು ನಗರ ಗಡಿಗಳಲ್ಲಿ 24/7 ನಾಕಾಬಂದಿಗೆ ಪೊಲೀಸ್ ಇಲಾಖೆ ತಾಕೀತು ಮಾಡಿದೆ.

ರಾಜ್ಯದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಮಹಾ ನಿರ್ದೇಶಕ ಡಾ. ಅಲೋಕ್‌ ಮೋಹನ್, ಫೆಬ್ರವರಿ 17 ರಿಂದ ಎಂಟತ್ತು ದಿನಗಳ ಕಾಲ ವಲಯವಾರು ಐಜಿಪಿ, ಎಸ್‌ಪಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿದ್ದಾರೆ. ಪ್ರತಿ ಜಿಲ್ಲೆಯ ಲಾ ಅಂಡ್ ಆರ್ಡರ್, ಅಪರಾಧ ಪ್ರಕರಣಗಳು, ಕಾನೂನುಬಾಹಿರ ಚಟುವಟಿಕೆಗಳ ಕುರಿತಂತೆ ಪರಿಶೀಲನೆ ನಡೆಸಿ ಹತ್ತು, ಹಲವು ಸೂಚನೆ ನೀಡಿದ್ದು, ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆ ಮತ್ತು ನಗರ ಗಡಿಗಳಲ್ಲಿ ನಾಕಾಬಂದಿ ನಿರಂತರವಾಗಿರಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಶಸ್ತ್ರಾಸ್ತ್ರ ಸಿಬ್ಬಂದಿ ನಿಯೋಜಿಸಬೇಕು. ಅಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಜಿಲ್ಲೆಯಲ್ಲಿರುವ ರೌಡಿಶೀಟರ್ಸ್‌ಗಳ ಮೇಲೂ ವಿಶೇಷ ನಿಗಾ ಇಡಬೇಕು. ಕೆಲವು ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ರೌಡಿಗಳ ಚಲವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ

ಸೈಬರ್ ಅಪರಾಧ ತಡೆ ಹಾಗೂ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಸಾಮಾಜಿಕ ಜಾಲ ತಾಣಗಳ ಮೇಲೂ ನಿಗಾ ವಹಿಸಲೇಬೇಕು. ಸಣ್ಣಪುಟ್ಟ ಘಟನೆಗಳೆಂದು ನಿರ್ಲಕ್ಷಿಸದೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು, ಸಣ್ಣ ನಿರ್ಲಕ್ಷೃವೂ ದೊಂಬಿ, ಗಲಭೆಯಂಥ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಸೈಬರ್ ವಂಚನೆಗಳನ್ನು ಕೂಡಲೇ ಪತ್ತೆ ಮಾಡಬೇಕು. ಅಪಘಾತಗಳ ಹತೋಟಿಗೂ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.

ಮಾದಕ ವಸ್ತುಗಳ ಮಾರಾಟ, ಸೇವನೆ ಪ್ರಕರಣಗಳ ವಿರುದ್ಧ(ಎನ್‌ಡಿಪಿಎಸ್)ವೂ ಕ್ರಮ ಜರುಗಿಸಬೇಕು. ಸಮಾಜಘಾತಕ ಶಕ್ತಿಗಳ ಕಾನೂನುಬಾಹಿರ ಚಟುವಟಿಕೆಗಳೆಡೆ ನಿಗಾ ಇರಲೇಬೇಕು. ಮಟ್ಕಾ, ಜೂಜು ಮೊದಲಾದ ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿಟ್ಟು, ಮುನ್ನೆಚ್ಚರಿಕೆ ವಹಿಸುವಂತೆ ತಾಕೀತು ಮಾಡಿದ್ದಾರೆ.

ಸಿಸಿ ಕ್ಯಾಮರಾಗಳು ಹೆಚ್ಚಾಗಬೇಕು

ಮಹಾನಗರ, ನಗರ, ಪಟ್ಟಣಗಳಲ್ಲಿ ಸಿಸಿ ಕ್ಯಾಮರಾಗಳ ಸಂಖ್ಯೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತದ ನೆರವು ಪಡೆಯಬೇ ಕು. ವಾಣಿಜ್ಯೋದ್ಯಮಿಗಳಲ್ಲೂ ಸಿಸಿ ಕ್ಯಾಮರಾಗಳು ಕಡ್ಡಾಯವಾಗಿರಬೇಕು. ಇದಕ್ಕಾಗಿ ಮಾರ್ಚ್ ಮಾಹೆಯಲ್ಲಿ ಸಿಸಿ ಕ್ಯಾಮರಾ ಅಳ ವಡಿಕೆ ಅಂದೋಲನ ನಡೆಸಬೇಕೆಂದು ನಿರ್ದೇಶಿಸಿದ್ದಾರೆ.

ಕುಡಿವ ನೀರು, ವಿದ್ಯುತ್ ಸಮಸ್ಯೆ ನಿವಾರಣೆ ಹೊಣೆ

ಬೇಸಿಗೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕುಡಿವ ನೀರು, ವಿದ್ಯುತ್ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ದೊಂದಿಗೆ ಸಮನ್ವಯ ಸಾಧಿಸಬೇಕು. ಕಾನೂನು ಸುವ್ಯವಸ್ಥೆ ರಕ್ಷಣೆ ನಿಟ್ಟಿನಲ್ಲಿ ಪೊಲೀಸರ ಜವಾಬ್ದಾರಿಯುತ ಕರ್ತವ್ಯ ನಿರ್ವಹಣೆಗೆ ತಾಕೀತು ಮಾಡಿರುವ ಹಿರಿಯ ಅಧಿಕಾರಿಗಳು, ಅಗತ್ಯ ವಾಹನಗಳು, ವಸತಿಗೃಹಗಳನ್ನು ಒದಗಿಸುವ ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

----