ನ್ಯೂಸ್

ಇಂದು ಸಂವಿಧಾನ ಓದಿನ ಕೊರತೆ ಇದೆ / ಅದರಿಂದ ನಮ್ಮಲ್ಲಿ ಅನೇಕ ವಿಷಯಗಳ ಬಗ್ಗೆ ಗೊಂದಲಗಳಿವೆ / ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್

ವಿಜಯವಾಣಿ ಸುದ್ದಿಜಾಲ ಕೋಲಾರ

ಸಂವಿಧಾನದ ಓದಿನ ಕೊರತೆ ಇದೆ. ಹಾಗಾಗಿ ನಮ್ಮಲ್ಲಿ ಅನೇಕ ವಿಷಯಗಳ ಬಗ್ಗೆ ಗೊಂದಲಗಳಿವೆ. ಸಂವಿಧಾನವು ೭೦ ವರ್ಷಗಳ ಹಿಂದೆಯೇ ಅನೇಕ ಅನುಮಾನಗಳಿಗೆ ಪರಿಹಾರ ನೀಡಿದೆ. ಉದಾಹರಣೆಗೆ ಅಸ್ಪೃಶ್ಯತೆಯನ್ನು ಸಂವಿಧಾನವೇ ನಿಶೇಧ ಮಾಡಿದೆ. ಹೊಸದಾಗಿ ನಿಶೇಧ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ತಿಳಿಸಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಶನಿವಾರ ಕೋಲಾರ ಜಿಲ್ಲಾ ಮಟ್ಟದ ಓದು ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಅಧಿಕಾರ ಹಂಚಿಕೆ, ಮೀಸಲಾತಿಗೆ ಮೊದಲಾದವುಗಳನ್ನು ಸ್ಪಷ್ಟವಾಗಿ ಸಂವಿಧಾನ ವಿವರಿಸಿದೆ. ಆದರೆ ಸಂವಿಧಾನದಲ್ಲಿರುವ ಅಂಶಗಳನ್ನು ಓದಿಕೊಳ್ಳದೆ ಚರ್ಚೆ ಮಾಡುವುದು ಅಪ್ರಸ್ತುತ ಎಂದರು.

ಭಾತರದಲ್ಲಿ ಬಗೆ ಬಗೆಯ ಜನರಿದ್ದಾರೆ. ಜಗತ್ತಿನ ನಾನಾ ಭಾಗಗಳಿಂದ ಇಲ್ಲಿಗೆ ಬಂದು ನೆಲಸಿದ್ದಾರೆ. ಪರಸ್ಪರ ಬೆರೆತಿದ್ದಾರೆ. ಯಾವ ಜಾತಿಯೂ ಇಂದು ಶುದ್ಧವಾಗಿ ಉಳಿದಿಲ್ಲ. ಎಲ್ಲವೂ ಬೆರಕೆಯಾಗಿವೆ. ಭಾರತೀಯರಲ್ಲಿ ಸಮಾನರಾಗಿ ಕಾಣುವ ಕೆಲವು ಲಕ್ಷಣಗಳನ್ನು ಗುರ್ತಿಸಿ ಪರಸ್ಪರ ಪ್ರೀತಿ ಸಹೋದರತೆಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಸಂವಿಧಾನದ ತಿಳುವಳಿಕೆ ಕಡಿಮೆ ಇರುವುದರಿಂದ ಯುವಕರಿಗೆ ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಅರಿಯಲು ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ೨೦೧೮ ರಿಂದ ಆರಂಭವಾದ ಈ ಅಭಿಯಾನ ಈಗಾಗಲೇ ೧೮ ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಇಂದು ಯುವಕರಲ್ಲಿ ಸಾಮಾಜಿಕ ಜಾಲತಾಣಗಳೇ ದೊಡ್ಡ ಓದಿನ ಕೇಂದ್ರಗಳಾಗಿವೆ. ಪುಸ್ತಕ ಹಿಡಿದು ಓದುವ ಹವ್ಯಾಸ ಕಡಿಮೆಯಾಗಿದೆ. ಸಂವಿಧಾನ ಓದು ಪುಸ್ತಕ ಹೆಚ್ಚು ಯುವಕರನ್ನು ತಲುಪುತ್ತಿರುವುದು ಸಂತೋಷದ ವಿಷಯ. ಅದರ ಸರಳ ನಿರೂಪಣೆ ಯುವಕರನ್ನು ಆಕರ್ಷಿಸತೊಡಗಿದೆ ಎಂದು ತಿಳಿಸಿದರು.

ಸಂವಿಧಾನ ಓದು ಪುಸ್ತಕ ಅರ್ಥಪೂರ್ಣವಾಗಿದೆ. ಸಮಾಜದ ಜನರ ಆರ್ಥಿಕ ಮತ್ತು ಸಾಂಸ್ಕೃತಿ ಜೀವನದ ಮೇಲೆ ಪರಿಣಾಮ ಬೀರುವಂತಾಗಿದೆ. ಸಂವಿಧಾನ ಓದು ಪುಸ್ತಕವೇ ಇದಕ್ಕೆ ಸಾಕ್ಷಿಯಾಗಿದೆ. ಸಂವಿಧಾನದ ಬಗ್ಗೆ ಶಾಲಾ ಕಾಲೇಜುಗಳಲ್ಲಿ, ಪತ್ರಿಕೆಗಳಲ್ಲಿ ಮಾತ್ರ ಕೇಳಿದ್ದೇವೆ. ಆದರೆ ಅನೇಕ ಜನಕ್ಕೆ ಸಂವಿಧಾನ ಏನು ಎಂಬುದರ ಬಗ್ಗೆ ಅರಿವಿಲ್ಲ. ಆದ್ದರಿಂದ ಸಂವಿಧಾನ ಓದು ಅಭಿಯಾನವನ್ನು ನಿವೃತ್ತ ನ್ಯಾಯಮೂರ್ತಿ ನಾಗಭೂಷಣ್‌ದಾಸ್ ರವರ ನೇತೃತ್ವದಲ್ಲಿ ಹಮ್ಮಿಕೊಂಡು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಂವಿಧಾನದ ಒಳಗೆ ಏನಿದೆ. ಅದಕ್ಕೂ ನಮಗೂ ಏನು ಸಂಬAಧ ಎಂಬುದು ಬಹಳ ಜನಕ್ಕೆ ಗೊತ್ತಿಲ್ಲದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಕೊರತೆ ನೀಗುವ ದಿಕ್ಕಿನಲ್ಲಿ ಇಂದು ಅಭಿಯಾನಗಳನ್ನು ನ್ಯಾಯಾಮೂರ್ತಿಗಳ ನೃತೃತ್ವದಲ್ಲಿ ೧೮ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸುವಂತಹ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

೨ ದಿನಗಳ ಓದು ಅಭಿಯಾನ ಶಿಬಿರದ ಮೊದಲನೇ ದಿನವಾದ ಶನಿವಾರ ಉದ್ಘಾಟನೆಯ ನಂತರ ಸಂವಿಧಾನ ರಚನೆ ಮತ್ತು ಮೂಲ ತತ್ವಗಳ ಬಗ್ಗೆ ಗೋಷ್ಠಿಯನ್ನು ನ್ಯಾಯಮೂರ್ತಿಗಳಾದ ನಾಗಮೋಹನ್‌ದಾಸ್ ರವರ ಅಧ್ಯಕ್ಷತೆ ನಡೆಯಿತು.

೨ನೇ ಗೋಷ್ಠಿಯನ್ನು ಸಂವಿಧಾನ ಮತ್ತು ಮಹಿಳೆ ಬಗ್ಗೆ ಶಾಂತಿ ನಾಗಲಾಪುರ ರವರು ಅಧ್ಯಕ್ಷತೆಯಲ್ಲಿ ನಡೆಯಿತು.

೩ನೇ ಗೋಷ್ಠಿ ಸಂವಿಧಾನ ಮತ್ತು ಆಸ್ಪೃಶ್ಯತೆ ನಿರ್ಮೂಲನೆ ಬಗ್ಗೆ ಡಾ.ಅರಿವು ಶಿವಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಿರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್, ಶಾಂತಿಪ್ರಕಾಶನ ಮುಬಾರಕ್ ಬಗ್ಬಾನ್, ದಲಿತ ಹಿರಿಯ ಮುಖಂಡ ಟಿ.ವಿಜಯಕುಮಾರ್, ಕಸಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ವಕೀಲ ಎಸ್.ಸತೀಶ್ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ೧೯ ಕೆ.ಎಲ್.ಆರ್. ೧೦ : ನಗರದ ಸುವರ್ಣ ಕನ್ನಡ ಭವನದಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರ ನಡೆಯಿತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಿಇಓ ಪ್ರವೀಣ್ ಪಿ.ಬಾಗೇವಾಡಿ ಮುಂತಾದವರು ಇದ್ದರು