ನ್ಯೂಸ್

ಇಂದಿನಿಂದ ಅರಣ್ಯ ಇಲಾಖೆ ಕಚೇರಿ ಮುಂದೆ ಧರಣಿ

ಹನೂರು: ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಮಾ.12 ರಿಂದ ನಾಲ್‌ರೋಡ್ ಅರಣ್ಯ ಇಲಾಖೆ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಸೋಮವಾರ ಗ್ರಾಮಸ್ಥರು ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ವೇಳೆ ಪಾಲಿಮೇಡು ಗ್ರಾಮದ ಎಸ್. ಮಣಿ ಎಂಬುವರು ಮಾತನಾಡಿ, ನಾಲ್‌ರೋಡ್ ಗ್ರಾಮವು ತಮಿಳುನಾಡು, ಹೂಗ್ಯಂ ಹಾಗೂ ಮಾರ್ಟಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೇಂದ್ರಸ್ಥಾನವಾಗಿದೆ. ಇಲ್ಲಿನ ವೃತ್ತದಲ್ಲಿ ಕೆಲವರು ಹಲವು ವರ್ಷಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವುದರ ಮೂಲಕ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಂಗಡಿಗಳನ್ನು ತೆರೆವುಗೊಳಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್, ವೆಂಕಟೇಶ್, ಮಾದನ್, ವೀರಮ್ಮ, ಮಾದೇವಿ, ಕೃಷ್ಣಮ್ಮ ಹಾಗೂ ಇನ್ನಿತರರಿದ್ದರು.