ವೃಷಣ ಭಾಗಕ್ಕೆ ಬಂದ ರಕ್ತ ಪುನಃ ಹೃದಯಕ್ಕೆ ಸಾಗದೇ ಅಲ್ಲೇ ಉಳಿದ ಕಾರಣ ತೀವ್ರ ಬಿಸಿ ಹಾಗೂ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 25 ವರ್ಷ ವಯಸ್ಸಿನ ವ್ಯಕ್ತಿಗೆ ನಾರಾಯಣ ಆಸ್ಪತ್ರೆಯಲ್ಲಿ ಇಂಟರ್‌ವೆನ್ಷನ್ ರೇಡಿಯಾಲಜಿ ವಿಧಾನದ ಮೂಲಕ ಪರಿಣಾಮಕಾರಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಚಿಕಿತ್ಸಾ ನಿರ್ದೇಶಕ ಡಾ.ಎಂ.ಎನ್.ರವಿ ತಿಳಿಸಿದರು.
ಈ ವಿಧಾನಕ್ಕೆ ವೆರಿಕೋಸೆಲ್ ಎಂಬೋಲೈಸೇಷನ್ ಎಂಬ ವೈದ್ಯಕೀಯ ಹೆಸರಿದೆ. ಸಾಧಾರಣವಾಗಿ ಇಂತಹ ಸಮಸ್ಯೆ ಕಂಡು ಬಂದಾಗ ಶಸ್ತ್ರ ಚಿಕಿತ್ಸೆ ಅನಿವಾರ್ಯ. ಆದರೆ, ರೋಗಿಗೆ ಇದರ ಬಗ್ಗೆ ಆತಂಕವಿದ್ದ ಕಾರಣ ಈ ನೂತನ ವಿಧಾನ ಬಳಸಲಾಗಿದೆ. ಈ ಸಮಸ್ಯೆ ಶೇ.50 ರಷ್ಟು ಮಂದಿಯಲ್ಲಿ ಸಾಮಾನ್ಯ. ಚಿಕಿತ್ಸೆ ಪಡೆಯದೇ ಹೋದಲ್ಲಿ ವೀರ್ಯದ ಗುಣಮಟ್ಟ ಕಡಿಮೆ ಆಗುತ್ತದೆ. ಇದರಿಂದಾಗಿ ಪುರುಷರ ಬಂಜೆತನ ಸಮಸ್ಯೆಯುಂಟಾಗುತ್ತದೆ. ಅಸ್ವಸ್ಥತೆ, ಊತಗಳು ಕಾಣಿಸಿಕೊಳ್ಳಬಹುದಾಗಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸದೇ ಈ ವಿಧಾನದ ಮೂಲಕ ವೃಷಣದಿಂದ ರಕ್ತ ಮತ್ತೆ ಹೃದಯಕ್ಕೆ ಹೋಗುವ ರೀತಿ ಮಾಡಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿಕಿತ್ಸೆ ನೀಡಿದ ತಂಡದಲ್ಲಿದ್ದ ಡಾ.ಎಸ್.ನಿತೇಶ್ ಹಾಗೂ ಡಾ.ಶೈಲೇಶ್ ಪೇಣೆ ಇದ್ದರು.