ತರೀಕೆರೆಯ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ರಾಜ್ಯೋತ್ಸವ ಮಾಸಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನುಡಿ ಸಂಭ್ರಮ ಕಾರ್ಯಕ್ರಮವನ್ನು ಎಸಿ ಡಾ. ಕೆ.ಜೆ.ಕಾಂತರಾಜ್ ಉದ್ಘಾಟಿಸಿದರು. ರವಿ ದಳವಾಯಿ, ಬಿ.ಎಸ್.ಭಗವಾನ್, ತ.ಮ.ದೇವಾನಂದ್, ಸುನಿತಾ, ಲತಾ, ಹರ್ಷಿಣಿ ಇತರರಿದ್ದರು. 
ನ್ಯೂಸ್

ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಮರೆ

ತರೀಕೆರೆ: ಪಾಲಕರು ಮತ್ತು ಮಕ್ಕಳಲ್ಲಿನ ಇಂಗ್ಲಿಷ್ ಗೀಳು ಕನ್ನಡತನವನ್ನೇ ಮರೆಸುತ್ತಿದೆ ಎಂದು ಎಸಿ ಡಾ.ಕೆ.ಜೆ.ಕಾಂತರಾಜ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ರಾಜ್ಯೋತ್ಸವ ಮಾಸಾಚರಣೆ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಾವಹಾರಿಕ ಇನ್ನಿತರ ಉದ್ದೇಶಗಳಿಗೆ ಇಂಗ್ಲಿಷ್ ಬಳಕೆ ಮಾಡಿದರೂ ಕನ್ನಡ ನಾಡಿನಲ್ಲಿ ಹುಟ್ಟಿರುವ ನಮಗೆ ಮಾತೃಭಾಷೆ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಬಾರದು ಎಂದರು.

ನಮ್ಮವರೇ ನಮ್ಮ ನಾಡು ನುಡಿ, ನೆಲ, ಜಲದ ಬಗ್ಗೆ ಆಸಕ್ತಿ ತೋರದಿದ್ದರೆ, ಶ್ರೇಷ್ಠ ಸಾಹಿತಿಗಳ ಜೀವನ ಚರಿತ್ರೆ ಅರಿತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿರುವ ಕನ್ನಡ ಭಾಷೆಗೆ ಕುತ್ತು ಬರುವುದು ನಿಶ್ಚಿತ. ಹೀಗಾಗಿ ಎಲ್ಲರೂ ಕನ್ನಡ ಭಾಷೆ ಉಳಿಸಲು ಮುಂದಾಗಬೇಕು ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಕನ್ನಡದ ಕಂಪು ಎಲ್ಲೆಡೆ ಪಸರಿಸುವ ಕೆಲಸ ವಿದ್ಯಾರ್ಥಿ ದಿಸೆಯಿಂದಲೇ ಆರಂಭವಾಗಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಬಿ.ಎಸ್.ಭಗವಾನ್, ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ, ಗಮಕ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ, ಮುಖ್ಯ ಶಿಕ್ಷಕಿ ಹರ್ಷಿಣಿ ಮತ್ತಿತರರಿದ್ದರು.