ನ್ಯೂಸ್

‘ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಬೇಕು ಆದ್ಯತೆ

ಬೆಂಗಳೂರು: ಸುಸ್ಥಿರ ‘ಇ-ಸಂಚಾರ’ (ಇ-ಮೊಬಿಲಿಟಿ) ವಲಯದಲ್ಲಿ ನಾವು ಎಲ್ಲೆಲ್ಲಿ ಸ್ವಯಂ ಉತ್ಪಾದನೆ ಮಾಡಬಹುದು ಎಂಬ ಅಧ್ಯಯನ ಆಗಬೇಕು. ಇದೇ ವೇಳೆ ಹೈಪರ್ ಲೋಕಲ್ ಪರಿಹಾರಗಳನ್ನು ಕಂಪನಿಗಳು ರೂಪಿಸಿದರೆ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ರಾಬರ್ಟ್ ಬಾಷ್‌ನ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದತ್ತಾತ್ರೇಯ ಸಾಲಗಾಮೆ ಹೇಳಿದರು.

“ಬೆಂಗಳೂರು ತಂತ್ರಜ್ಞಾನ ಶೃಂಗಮೇಳ- 2020”ದ ಎರಡನೇ ದಿನವಾದ ಶುಕ್ರವಾರ ಜರ್ಮನಿ ಕಾನ್ಸುಲೇಟ್ ನೇತೃತ್ವದಲ್ಲಿ ನಡೆದ 'ಇ- ಮೊಬಿಲಿಟಿ- ಭವಿಷ್ಯದ ಹಾದಿ' ಕುರಿತ ಸಂವಾದದಲ್ಲಿ ಅವರು ಭಾಗವಹಿಸಿದ್ದರು.

ಸಾಂಪ್ರದಾಯಿಕ ಸಾರಿಗೆಯಿಂದ ಇ-ಮೊಬಿಲಿಟಿಯತ್ತ ರೂಪಾಂತರಗೊಳ್ಳುವಲ್ಲಿ ಸರ್ಕಾರದ ಕಾರ್ಯನೀತಿಯ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್ 1 ಹಾಗೂ ಫೇಮ್ 2 ನೀತಿಗಳು ಇ-ವಾಹನ ಉದ್ಯಮಕ್ಕೆ ಉತ್ತೇಜನಕಾರಿಯಾಗಿವೆ. ಆರಂಭದ ಇದೇ ವೇಗವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 2022ರ ನಂತರದ ಸರ್ಕಾರದ ನೀತಿಯೂ ಸ್ಪಷ್ಟವಾಗಿರಬೇಕು. ಇವಿ ಕ್ಷೇತ್ರದ ಮೂಲಸೌಕರ್ಯದಂತಹ ಕ್ಷೇತ್ರದಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಿಂದ ವೇಗವರ್ಧನೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಪ್ರಬಲವಾಗಿದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿದೆ. ದೇಶದಲ್ಲಿ ಮೊತ್ತಮೊದಲ ಇ-ವಾಹನ ಉದ್ಯಮ ಸ್ಥಾಪನೆಯಾಗಿದ್ದೇ ಬೆಂಗಳೂರಿನಲ್ಲಿ ಎಂದು ನೆನಪಿಸಿಕೊಂಡರು.