ನ್ಯೂಸ್

ಇ.ಡಿ. ಬಿಜೆಪಿ, ಆರ್‌ಎಸ್‌ಎಸ್‌ನ ಬಾಲಂಗೋಚಿ

ಜಾರಿ ನಿರ್ದೇಶನಾಲಯ(ಇಡಿ) ತನ್ನ ಪಾವಿತ್ರ್ಯ ಕಳೆದುಕೊಂಡಿರುವ ಜತೆಗೆ ಬಿಜೆಪಿ, ಆರ್‌ಎಸ್‌ಎಸ್‌ನ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಪತ್ರಿಕಾ ಹೇಳಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಸೇರಿಸಿದ್ದು, ದುರುದ್ದೇಶದ ನಡೆಯ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಿರುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ಪತ್ರಿಕಾ ಪ್ರಕಟಣೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ನಾಶ ಮಾಡುವ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಸಂಚಿಕೆ ರೀತಿ ಮಾಹಿತಿ ಹಂಚಿಕೊಳ್ಳಬಹುದೇ? ತನಿಖಾ ಮಾಹಿತಿ ಬಹಿರಂಗಪಡಿಸಲು ನ್ಯಾಯಾಲಯದ ನಿರ್ದೇಶನ ಇತ್ತೇ? ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿದ್ದರಾಮಯ್ಯ ಹೆಸರಲ್ಲಿ ನಿವೇಶನ ಇತ್ತೇ? ಪ್ರಕಟಣೆಯಲ್ಲಿ ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಹೆಸರು ಸೇರಿಸುವ ನಿಮ್ಮ ಉದ್ದೇಶ ಏನು ಎಂದು ಪ್ರಶ್ನಿಸಿದ ಅವರು, 142 ನಿವೇಶನಗಳ ಸಂಖ್ಯೆ ಬಿಡುಗಡೆ ಮಾಡಿರುವ ಇಡಿ ಅಧಿಕಾರಿಗಳು ಯಾರ ಹೆಸರಲ್ಲಿದೆ ಎಂಬ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ನಿವೇಶನದ ಉಲ್ಲೇಖವಿಲ್ಲ. ಬೆಂಗಳೂರಿನ ಮಂಜುನಾಥ್, ಮೈಸೂರಿನ ಜಯರಾಮ್, ಕ್ಯಾಥಡ್ರೆಲ್ ಪ್ಯಾರಲ್ ಸೊಸೈಟಿಯ 63, ಬಿಜೆಪಿ, ಜೆಡಿಎಸ್ ಮುಖಂಡರ 97 ನಿವೇಶನಗಳನ್ನು ಬೇನಾಮಿ ಹೆಸರಲ್ಲಿ ಪಡೆದುಕೊಂಡಿರುವ ಮಾಹಿತಿ ನಮ್ಮ ಬಳಿ ಇದೆ ಎಂದರು.