ಆಸ್ತಿ ಮಾರಾಟ ಮಾಡಲು ಒಪ್ಪದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕುಂಬಾರಕೊಪ್ಪಲಿನ ಮಹದೇಶ್ವರ ಬಡಾವಣೆಯ 10ನೇ ಕ್ರಾಸ್ ನಿವಾಸಿ ಗಾಯತ್ರಿ(54) ಮೃತ ಗೃಹಿಣಿ. ಈಕೆಯನ್ನು ಕೊಲೆ ಮಾಡಿದ ಪತಿ ಪಾಪಣ್ಣ(64) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹದೇಶ್ವರ ಬಡಾವಣೆಯ ನಿವಾಸದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕೃತ್ಯ ನಡೆದಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣಕಾಸು ಸಮಸ್ಯೆಯಲ್ಲಿದ್ದ ಪಾಪಣ್ಣ:
ಗಾಯತ್ರಿ ಮತ್ತು ಪಾಪಣ್ಣ ದಂಪತಿಗೆ ಇಬ್ಬರು ಗಂಡು ಸೇರಿದಂತೆ ಮೂರು ಮಕ್ಕಳಿದ್ದು, ಮಗಳು ಮತ್ತು ಒಬ್ಬ ಮಗನಿಗೆ ಮದುವೆ ಮಾಡಲಾಗಿದೆ. ಆರೋಪಿ ಪಾಪಣ್ಣ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಮನೆ ನಿರ್ಮಿಸಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ತುಂಬ ನಷ್ಟ ಅನುಭವಿಸಿದ್ದ ಪಾಪಣ್ಣ, ಹೆಚ್ಚು ಸಾಲ ಮಾಡಿಕೊಂಡಿದ್ದ. ಈ ಸಂಬಂಧ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಚರ್ಚೆ ನಡೆಸಿದ್ದ. ತನ್ನ ಆಸ್ತಿ ಮಾರಾಟ ಮಾಡಿ ಸಾಲ ತೀರಿಸುವುದಾಗಿಯೂ ಹೇಳಿದ್ದ. ಆದರೆ, ಪತ್ನಿ ಮತ್ತು ಮಕ್ಕಳು ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇವರಿಬ್ಬರ ನಡುವೆ ನಿತ್ಯ ಕಲಹ ನಡೆಯುತ್ತಲೇ ಇತ್ತು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದಂಪತಿ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಗಾಯತ್ರಿ, ದೋಸೆ ತವಾದಿಂದ ತನ್ನ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರಿಂದ ಕೆರಳಿದ ಪಾಪಣ್ಣ, ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.