ತಲಕಾಡು: ಹಳೇ ಕಾಲದ ಕಂದಾಯ ಇಲಾಖೆ ಹಿಡುವಳಿ ಸರ್ವೇ ನಂಬರ್ ಜಮೀನುಗಳಲ್ಲಿ ನೂರಾರು ವರ್ಷದಿಂದ ಗ್ರಾಮದ ಶೇ.75ರಷ್ಟು ನಿವಾಸಿಗಳು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಮೋಜಿಣಿ ತಂತ್ರಾಂಶ ಇಲಾಖೆ ದಾಖಲೆಗಳ ಪ್ರಕಾರ ಬಹುತೇಕ ಜನರ ಆಸ್ತಿಗಳು ಗ್ರಾಮ ಠಾಣೆಯ ಹೊರಗಡೆ ಇದೆ ಎಂದು ಕಂದಾಯ ಇಲಾಖೆ ದೃಢೀಕರಣ ನೀಡುತ್ತಿದೆ. ಇದರಿಂದ ಆಸ್ತಿಯ ಮಾಲೀಕರು ಕ್ರಮಬದ್ದ ಆಸ್ತಿ(ಇ-ಸ್ವತ್ತು 9 ಅಂಡ್ 11 ಎ)ಆಗಿ ಪರಿವರ್ತನೆ ಮಾಡಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮಠಾಣೆಯ ಹೊರಗಡೆ ಇರುವ ಸಾರ್ವಜನಿಕರ ಆಸ್ತಿಗಳಿಗೆ ಇಲ್ಲಿನ ಗ್ರಾಮ ಪಂಚಾಯಿತಿ 11(ಬಿ) ಇ-ಸ್ವತ್ತು ಖಾತೆ ನೀಡುತ್ತದೆ. ಇದು ಕ್ರಮ ಬದ್ದವಲ್ಲದ ಆಸ್ತಿಯಾದ್ದರಿಂದ ಆಸ್ತಿಯ ಮಾಲೀಕರಿಗೆ ಈ ದಾಖಲೆ ಪ್ರಯೋಜನಕ್ಕೆ ಬರುತ್ತಿಲ್ಲ.
ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ 4,500ಕ್ಕೂ ಹೆಚ್ಚಿನ ಜನರ ಆಸ್ತಿಗಳಿದ್ದು, ಇದರಲ್ಲಿ ಶೇ.75 ರಷ್ಟು ಆಸ್ತಿ ಬ್ರಿಟಿಷರ ಕಾಲದ ಗ್ರಾಮಠಾಣೆ ನಕಾಶೆ ಪ್ರಕಾರ ಈಗಲೂ ಮುಂದುವರಿಯುತ್ತಿವೆ. ಗ್ರಾಮ ಠಾಣೆಯ ಹೊರಗಡೆ ನಿವಾಸಿಗಳು ಗ್ರಾಮಠಾಣೆಯ ಒಳಗಡೆ ಆಸ್ತಿ ದಾಖಲೆಯಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗದೆ ಹತ್ತಾರು ವರ್ಷದಿಂದ ಬವಣೆ ಪಡುತ್ತಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಸರ್ವೇ ನಂಬರ್‌ಗಳಲ್ಲಿ ನಿವಾಸಿಗಳು ಶತಮಾನಗಳಿಂದಲೂ ವಸತಿ ಕಟ್ಟಡಗಳ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇವರನ್ನು ಗ್ರಾಮಠಾಣೆ ಒಳಗಡೆ ಸೇರ್ಪಡೆ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ತಹಸೀಲ್ದಾರ್ ಅವರಿಗೆ ನಡಾವಳಿ ಮೂಲಕ ವರ್ಷದ ಹಿಂದೆ ಕೋರಿತ್ತು. ಪಂಚಾಯಿತಿ ಕೋರಿಕೆ ಮೇರೆಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಕಡತವನ್ನು ತಹಸೀಲ್ದಾರ್ ಕಚೇರಿಯಿಂದ ರವಾನಿಸಿತ್ತು.
ಎಸಿ ಸೂಚನೆ ಇದ್ದರೂ ಆಗದ ಕೆಲಸ: ಈ ಕುರಿತು ಜಿಲ್ಲಾ ಉಪವಿಭಾಗಾಧಿಕಾರಿಗಳು ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಗ್ರಾ.ಆ,ಪ/441 ಗ್ರಾ.ಪಂ.ಅ/2016 (ಭಾಗ -3) ದಿನಾಂಕ 28/10/2016 ಪ್ರಕಾರ ಗ್ರಾಮಠಾಣಾ ಜತೆಗೆ ಹೊಂದಿಕೊಂಡಂತೆ ತಲಕಾಡಿನಲ್ಲಿ ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶ ಒಳಗೊಂಡಂತೆ ಹೊಸದಾಗಿ ಸರ್ವೇ ಕಾರ್ಯ ಕೈಗೊಂಡು, ತದನಂತರ ಗ್ರಾಮಸಭೆಯನ್ನು ಏರ್ಪಡಿಸಬೇಕು. ತಹಸೀಲ್ದಾರ್ ಹಾಗೂ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ, ಗ್ರಾಮಠಾಣೆ ವಿಸ್ತರಣೆ ಪ್ರದೇಶವನ್ನು ಕ್ರಮ ಬದ್ದಪಡಿಸಿಕೊಂಡು, ಸೂಕ್ತ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರ್‌ಗೆ ಜಿಲ್ಲಾ ಉಪವಿಭಾಗಾಧಿಕಾರಿಗಳು ಡಿ.27/22ರಂದು ಪತ್ರದ ಮುಖೇನ ಸೂಚಿಸಿದ್ದರು.
ಆದರೆ ಇದುವರೆಗೂ ಈ ಕೆಲಸವಾಗದೆ ತಹಸೀಲ್ದಾರ್ ಕಚೇರಿಯಲೇ ಪ್ರಸ್ತಾವನೆ ಕಡತ ಸಲ್ಲಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಸ್ವಿತ್ವಕ್ಕೆ ಬಂದಿದೆ. ಈಗಲಾದರೂ ನನೆಗುದಿಗೆ ಬಿದ್ದಿರುವ ಸಾರ್ವಜನಿಕರ ಕಡತಕ್ಕೆ ಮೋಕ್ಷ ಸಿಗಲಿದೆ ಎಂಬ ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ.