ನ್ಯೂಸ್

ಆಷಾಢ ಶುಕ್ರವಾರ ಪೂಜೆಗೆ ಸಕಲ ಸಿದ್ಧತೆ

ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು, ಭಕ್ತರು ಸುಲಲಿತವಾಗಿ ದೇವರ ದರ್ಶನ ಮಾಡಲು ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಬಾರಿ ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ಚಾಮುಂಡಿಬೆಟ್ಟದಲ್ಲಿ ಬುಧವಾರ ಸಿದ್ಧತೆ ಕಾರ್ಯದ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 27, ಜುಲೈ 4, ಜುಲೈ11, ಜುಲೈ 18ರಂದು ಆಷಾಢ ಶುಕ್ರವಾರ, ಜುಲೈ 17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಈ ದಿನದಂದು ದರ್ಶನ ಪಡೆಯಲಾಗದವರು, ಶನಿವಾರ, ಭಾನುವಾರದಂದು ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ, ಅಗತ್ಯ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಲಾಗಿದೆ ಎಂದು ತಿಳಿಸಿದರು. ಪಾಸ್ ವ್ಯವಸ್ಥೆ ಇಲ್ಲ: ಆಷಾಢ ಶುಕ್ರವಾರ ದೇವರ ದರ್ಶನಕ್ಕೆ ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ಧರ್ಮ ದರ್ಶನ, 300 ರೂ. ಹಾಗೂ 2000 ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಶಿಫಾರಸು ಪತ್ರಗಳನ್ನು ಪರಿಗಣಿಸುವುದಿಲ್ಲ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಪ್ರವೇಶವಿದೆ. ಇವರನ್ನು ಹೊರತುಪಡಿಸಿ ಶುಕ್ರವಾರ, ಶನಿವಾರ, ಭಾನುವಾರದಂದು ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬೆಟ್ಟದಲ್ಲಿ ವಾಸ ಮಾಡುವ ಜನರು ಗುರುತಿನ ಪತ್ರ ತೋರಿಸಿ ಓಡಾಡಬಹುದು ಎಂದರು.

ಬಸ್ ಹತ್ತುವಾಗಲೇ ಟಿಕೆಟ್

ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲೇ ದರ್ಶನದ ಟಿಕೆಟ್‌ಗಳನ್ನು ನೀಡಲಾಗುತ್ತದೆ. 300 ರೂ. ಹಾಗೂ 2 ಸಾವಿರ ರೂ. ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಯುವ ಭಕ್ತರನ್ನು ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್‌ಗಳಲ್ಲಿ ಕರೆತರಲಾಗುತ್ತದೆ. ಇದಕ್ಕಾಗಿ ಮೂರು ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಬೆಟ್ಟದ ಮೇಲೆ ಬರುವ ಬಸ್ಸುಗಳು ಧರ್ಮ ದರ್ಶನ ಪಡೆಯುವ ಭಕ್ತರನ್ನು ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಇಳಿಸುತ್ತವೆ. ಅಲ್ಲಿಂದಲ್ಲೇ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು. ಭಕ್ತರು ಸರತಿ ಸಾಲಿನಲ್ಲಿ ಹೋಗಬೇಕು. 300 ರೂ. ಟಿಕೆಟ್ ಪಡೆದುಕೊಂಡಿರುವವರು ಮಲ್ಟಿಲೆವಲ್ ಪಾರ್ಕಿಂಗ್ ಬಳಿ ಇರುವ ಬಸ್ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸರತಿ ಸಾಲಿನಲ್ಲಿ ಹೋಗಬೇಕು. 2000 ರೂ. ಟಿಕೆಟ್ ಪಡೆದುಕೊಂಡಿರುವವರು ಮಹಿಷಾಸುರ ಪ್ರತಿಮೆಯ ಮುಂಭಾಗದಿಂದ ದೇವಸ್ಥಾನ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಲಲಿತಮಹಲ್ ಪ್ಯಾಲೇಸ್ ಬಳಿ ಬಸ್ ಹತ್ತುವಾಗಲೇ ತಮ್ಮ ಪಾದರಕ್ಷೆಗಳನ್ನು ಬಿಡಬೇಕು. ಇದಕ್ಕಾಗಿ ಕೌಂಟರ್ ತೆರೆಯಲಾಗಿದೆ ಎಂದರು.

ಉಚಿತ ಡ್ರೈಫ್ರೂಟ್ಸ್: ಧರ್ಮದರ್ಶನದ ಸಾಲಿನಲ್ಲಿ ಬರುವ ಭಕ್ತರಿಗೆ ಉಚಿತವಾಗಿ ಡ್ರೈಫ್ರೂಟ್ಸ್, ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ಶೌಚಗೃಹಗಳನ್ನು ತೆರೆಯಲಾಗಿದೆ. ಇದೇ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ನಂದಿನಿ ಉತ್ಪನ್ನಗಳು, ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟ ಮಾಡಲಾಗುತ್ತದೆ. ದೇವಿಯ ದರ್ಶನ ಪಡೆಯುವ ಎಲ್ಲ ಭಕ್ತರಿಗೂ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್‌ಗಳನ್ನು ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತದೆ ಎಂದರು.

ಮೆಟ್ಟಿಲು ಹತ್ತಿದವರಿಗೆ ನೇರ ದರ್ಶನ

ಸಾವಿರ ಮೆಟ್ಟಿಲು ಹತ್ತಿಕೊಂಡು ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ನೇರ ದರ್ಶನದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೆಟ್ಟಿಲು ಬಳಿಯಿಂದಲೇ ಬ್ಯಾರಿಕೇಡ್ ಅಳವಡಿಸಿ, ಪ್ರತ್ಯೇಕ ಸರತಿ ಸಾಲನ್ನು ಮಾಡಲಾಗಿದೆ. ಇಲ್ಲಿಂದ ಭಕ್ತರು ದೇವಾಲಯ ಪ್ರವೇಶಿಸಿ, ದೇವಿಯ ದರ್ಶನ ಮಾಡಬಹುದು ಎಂದು ಡಿಸಿ ತಿಳಿಸಿದರು.

ರೀಲ್ಸ್ ಮಾಡುವಂತಿಲ್ಲ: ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವಮೂರ್ತಿ ಸಮೀಪ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮರಾದಲ್ಲಿ ಛಾಯಾಚಿತ್ರ ತೆಗೆಯುವುದು, ರೀಲ್ಸ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘನೆ ಮಾಡಿದಲ್ಲಿ ಮೊಬೈಲ್ ಮತ್ತು ಕ್ಯಾಮರಾಗಳನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುವುದು. ಇನ್ನು ಮುಂದೆ ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಪ್ರಸಾದ ವಿತರಣೆ ಜಾಗ ಬದಲು

ಪ್ರತಿವರ್ಷ ಮಲ್ಟಿ ಲೆವಲ್ ಪಾರ್ಕಿಂಗ್ ಜಾಗದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕಾರ್ಯ ನಡೆಯುತ್ತಿತ್ತು. ಈ ಬಾರಿ ಅರಣ್ಯ ಮಾಹಿತಿ ಭವನದ ಆವರಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಶುಕ್ರವಾರ ಪ್ರಾಧಿಕಾರದ ವತಿಯಿಂದಲೇ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತದೆ. ಮುಂದಿನ ಶುಕ್ರವಾರಗಳಲ್ಲಿ ಸಂಘ-ಸಂಸ್ಥೆಗಳು, ಸೇವಾರ್ಥದಾರರನ್ನು ಒಳಗೊಂಡಿಸಿಕೊಂಡು ಮಾಡುವ ಆಲೋಚನೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಯುಕೇಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ರೂಪಾ, ಡಿಸಿಪಿಗಳಾದ ಮುತ್ತುರಾಜ್, ಸುಂದರ್ ರಾಜ್ ಇದ್ದರು.