ನಾಡು ದೀಪಾವಳಿ ಸಂಭ್ರಮದಲ್ಲಿದೆ. ಭಾರತ ಮಾತ್ರವಲ್ಲ, ವಿಶ್ವದ ಹಲವು ದೇಶಗಳಲ್ಲಿ ದೀಪಾವಳಿಯ ಬೆರಗು, ಮೆರುಗು ಪಸರಿಸಿದೆಯೆನ್ನುವುದು ನಮಗೆ ಹೆಮ್ಮೆಯ ಸಂಗತಿಯೇ ಸರಿ. ದೀಪವು ಕತ್ತಲೆಯನ್ನು ಕಳೆಯುತ್ತದೆ ಎನ್ನುವುದರ ಜತೆಗೆ, ಅದು ನಮಗೆ ಜ್ಞಾನದ ಸಂಕೇತವೂ ಹೌದು. ಹೀಗೆಂದೇ ದೀಪಾವಳಿ ನಮಗೆ ಕೇವಲ ಹಬ್ಬದ ಆಚರಣೆಯಲ್ಲ, ಬದಲಿಗೆ ಅದು ನಮ್ಮನ್ನು ಹೊಸದಾರಿಯಲ್ಲಿ ನಡೆಸುವ ಪರ್ವವೂ ಹೌದು. ಪೌರಾಣಿಕ ಐತಿಹ್ಯಗಳ ಜತೆಗೆ, ಸಮಕಾಲೀನ ಆಶಯಗಳೂ ಈ ಹಬ್ಬದ ಜತೆ ತಳುಕುಹಾಕಿಕೊಂಡಿರುತ್ತವೆ. ಇಡೀ ಜಗತ್ತು ಇನ್ನೂ ಕರೊನಾ ಕರಿನೆರಳಿನಿಂದ ಹೊರಬಂದಿಲ್ಲ. ಒಂದೊಮ್ಮೆ ಮೂರನೆಯ ಅಲೆ ವಕ್ಕರಿಸಿದರೂ, ಮೊದಲಿನ ಎರಡು ಅಲೆಗಳಷ್ಟು ಪ್ರಬಲವಾಗಿರುವುದಿಲ್ಲ ಎಂದು ತಜ್ಞರು ಹೇಳಿರುವುದರಿಂದಾಗಿ. ಅಷ್ಟರಮಟ್ಟಿಗೆ ಸಮಾಧಾನಪಡಬಹುದು. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಎಲ್ಲ ರಂಗಗಳೂ ಬಾಧಿತವಾಗಿವೆ. ಕೌಟುಂಬಿಕ ಜೀವನದಲ್ಲಿಯೂ ಅನೇಕ ಬದಲಾವಣೆಗಳು ಗೋಚರಿಸಿವೆ. ಇನ್ನು, ಉದ್ಯಮ ವಲಯವಂತೂ ಕೇಳುವುದೇ ಬೇಡ. ಯಾವುದೇ ದೇಶದ ಆರ್ಥಿಕತೆಯಲ್ಲಿ ಕೃಷಿ, ಕೈಗಾರಿಕೆಗಳು ಪ್ರಮುಖ ಪಾತ್ರ ನಿಭಾಯಿಸುತ್ತವೆ. ಕೈಗಾರಿಕೆಗಳಿಗೆ ತೊಂದರೆಯಾಗಿದ್ದರಿಂದಾಗಿ, ಸರ್ಕಾರಗಳಿಗೆ ಭಾರಿ ಪ್ರಮಾಣದ ತೆರಿಗೆ ನಷ್ಟವಾಯಿತು.
ಇನ್ನೊಂದೆಡೆ, ಉದ್ಯೋಗನಷ್ಟವಾಗಿದ್ದರಿಂದಾಗಿ ಕೈಗಾರಿಕೆ ಅವಲಂಬಿತರು ಸಂಕಷ್ಟ ಎದುರಿಸಬೇಕಾಯಿತು. ಈಗೇನೋ ಉದ್ಯಮರಂಗ ಮತ್ತೆ ಚಟುವಟಿಕೆ ಆರಂಭಿಸಿದ್ದು, ಕ್ರಮೇಣ ಕೋವಿಡ್ಪೂರ್ವದ ಹಂತಕ್ಕೆ ಬರುತ್ತಿದೆ. ಆದರೂ, ಮೊದಲಿದ್ದಷ್ಟು ಪ್ರಮಾಣದ ಉದ್ಯೋಗಸೃಷ್ಟಿಯಾಗುತ್ತಿಲ್ಲ. ಎಲ್ಲೋ ಐಟಿ ವಲಯ ಮಾತ್ರ ಈ ಮಾತಿಗೆ ಅಪವಾದವೆನ್ನಬಹುದು. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಬೇಕಾದುದು ಇಂದಿನ ತುರ್ತ. ಏಕೆಂದರೆ, ಜನರ ಆದಾಯ ಕಡಿಮೆಯಾಗಿದ್ದು, ಕುಟುಂಬ ಖರ್ಚು ಸರಿಹೊಂದಿಸಲು ಎಷ್ಟೋ ಮಂದಿ ಪರದಾಡುತ್ತಿದ್ದಾರೆ. ಜನರ ಕೈಲಿ ಹಣವಿಲ್ಲದಿದ್ದರೆ ಅವರು ಖರ್ಚುಮಾಡಲು ಹೋಗುವುದಿಲ್ಲ. ಆಗ ಮಾರುಕಟ್ಟೆಯಲ್ಲಿ ವಸ್ತುಗಳಿಗೆ ಬೇಡಿಕೆ ಗಿಟ್ಟುವುದಿಲ್ಲ. ಯಾವಾಗ ವಸ್ತುಗಳಿಗೆ ಗ್ರಾಹಕರು ಇಲ್ಲವೋ ಆಗ ಸಂಬಂಧಿಸಿದ ಉದ್ಯಮ ಕೂಡ ಕುಂಟುತ್ತದೆ. ಒಟ್ಟಿನಲ್ಲಿ ಇದೊಂದು ಚಕ್ರ. ಇಂಥ ಸಂದರ್ಭದಲ್ಲಿ ಸರ್ಕಾರದ ಜತೆಗೆ ಖಾಸಗಿ ವಲಯ ಕೂಡ ಕೈಜೋಡಿಸಬೇಕಾಗುತ್ತದೆ.
ಕರೊನಾದಿಂದಾಗಿ ಒಂದು ಅಭೂತಪೂರ್ವ ಮಾನವೀಯ ಬಿಕ್ಕಟ್ಟು ನಮ್ಮೆದುರು ಸೃಷ್ಟಿಯಾಗಿದೆ. ಈ ಸನ್ನಿವೇಶ ಎದುರಿಸಲು ಎಲ್ಲರ ಸಹಕಾರ, ಸಹಭಾಗಿತ್ವ ಬೇಕಾಗುತ್ತದೆ. ಇಂಥ ವಾತಾವರಣದಲ್ಲೂ ಒಂದಷ್ಟು ಆಶಾವಾದ ಇದ್ದೇ ಇದೆ. ಸವಾಲು ಎದುರಾದಾಗಲೇ ಮಾನವನ ನೈಜಶಕ್ತಿ ಪ್ರಕಟವಾಗುವುದು. ಈ ಸಂದರ್ಭವನ್ನು ಬಳಸಿಕೊಂಡು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಸರ್ವರೀತಿಯಲ್ಲಿ ಯತ್ನಿಸಬೇಕಾಗುತ್ತದೆ. ಈಗಾಗಲೇ ಆ ಉಪಕ್ರಮಕ್ಕೆ ಚಾಲನೆ ದೊರೆತಿದ್ದು, ಇಲ್ಲಿ ಅಗಾಧ ಬೆಳವಣಿಗೆಯ ಅವಕಾಶವಿದೆ. ಹಾಗೇ, ಪ್ರವಾಸೋದ್ಯಮದಲ್ಲಿ ಕೂಡ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಆದಾಯದ ಸಾಧ್ಯತೆ ಇದೆ. ಈ ದೀಪಾವಳಿಯು ಇಂಥ ಅವಕಾಶಗಳ ಶೋಧಕ್ಕೆ ಬೆಳಕು ತೋರಲಿ; ಜನಜೀವನ ಸಮೃದ್ಧಿಗೆ ಮರಳಲಿ ಎಂಬುದು ಈ ಹೊತ್ತಿನ ಆಶಯ.