ಎನ್.ಆರ್.ಪುರ: ಸರ್ಕಾರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವ ಧನಕ್ಕಿಂತ ಸಂಬಳ ನಿಗದಿಮಾಡಿ ಪ್ರತಿ ತಿಂಗಳೂ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಎನ್.ಆರ್.ಪುರ-5 ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 50 ವರ್ಷ ತುಂಬಲಿದ್ದು ಸಿದ್ದರಾಮಯ್ಯ ಸರ್ಕಾರ ಈ ಸವಿ ನೆನಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಳ ಮಾಡಬೇಕು. ಈಗಾಗಲೇ ಹಲವಾರು ಅಂಗನವಾಡಿಗಳ ಕಟ್ಟಡ ಅಭಿವೃದ್ಧಿ ಮಾಡಿದ್ದು ದುರಸ್ತಿ ಮಾಡಬೇಕಾಗಿರುವ ಅಂಗನವಾಡಿಗಳ ಪಟ್ಟಿ ಮಾಡಲಾಗಿದೆ ಎಂದರು.
ಸಿಡಿಪಿಒ ಇಲಾಖೆಯ ವಲಯ ಮೇಲ್ವಿಚಾರಕಿ ಸಾವಿತ್ರಿ ಮಾತನಾಡಿ, 2018-19ನೇ ಸಾಲಿನಿಂದ ಕೇಂದ್ರ ಸರ್ಕಾರ ಪ್ರತಿ ವಷರ್ ಸೆ.1 ರಿಂದ 30 ರವರೆಗೆ ಪೋಷಣ್ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಈ ವರ್ಷ ಸೆ.12 ರಿಂದ ಅ.12ರವರೆಗೆ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಿರಬೇಕು. ಮಕ್ಕಳೂ ಆರೋಗ್ಯವಾಗಿರಬೇಕು ಎಂಬುದೇ ಅಭಿಯಾನದ ಉದ್ದೇಶ ಎಂದರು.
ಪಪಂ ಸದಸ್ಯೆ ಸುರೈಯಾಬಾನು, ಸಿಡಿಪಿಒ ಇಲಾಖೆಯ ಮುತ್ತಿನಕೊಪ್ಪ ವಲಯದ ಮೇಲ್ವಿಚಾರಕಿ ಕಾವ್ಯಾ, ಪೋಷಣ್ ಅಭಿಯಾನ ಸಂಯೋಜಕ ಪ್ರದೀಪ್, ಆರೋಗ್ಯ ಇಲಾಖೆಯ ಪವನ್‌ಕರ್, ಸುಹಾಸ್, ಸಿಸ್ಟರ್ ಸುಪ್ರೀತಾ, ಮಂಜುಳಾ, ನಿರ್ಮಲಾ, ಪಟ್ಟಣದ ವಿವಿಧ ಅಂಗನವಾಡಿಗಳ ಕಾರ್ಯಕರ್ತೆಯರಾದ ರಮಾ, ಶಿವರತ್ನಾ, ಅನಿತಾ, ಶೈಲಾ, ಕವಿತಾ, ಲಕ್ಷ್ಮೀದೇವಿ, ಆಶಾ, ಮಧು ಮಾಲತಿ, ಉಷಾ, ಸೌಮ್ಯಾ, ಶಾಂತಾ, ಪೂರ್ಣಿಮಾ ಇತರರಿದ್ದರು.