ನ್ಯೂಸ್

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರಿಗೆ ಜಾಗೃತಿ ಕಾರ್ಯಾಗಾರ/ಬಾಲ್ಯವಿವಾಹ, ಪೋಕ್ಸೋ ಪ್ರಕರಣ ತಡೆಗೆ ಜನರಿಗೆ ಅರಿವು ಮೂಡಿಸಿ/ಅಕ್ರಂಪಾಷಾ

ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು, ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಪೊಲೀಸ್ ಸಿಬ್ಬಂದಿಗಾಗಿ ನಡೆದ ಒಂದು ದಿನದ ಬಾಲ್ಯವಿವಾಹ ನಿಷೇಧ ಕಾಯಿದೆ-೨೦೦೬ ಹಾಗೂ ಪೋಕ್ಸೋ ಕಾಯಿದೆ-೨೦೧೨ರ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಸಂರಕ್ಷಣಾ ಕಾನೂನುಗಳ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಪ್ರತಿಯೊಬ್ಬರಿಗೂ ಅರಿವು ಅಗತ್ಯವಿದೆ, ನೀವು ನಿಮ್ಮ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಮಾಹಿತಿ ಪಡೆದು ಸಮಾಜಕ್ಕೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಮಾತನಾಡಿ, ತಾಯಿಯ ಗರ್ಭದಲ್ಲಿರುವ ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಇದೆ, ದೈನಂದಿನ ಕಾನೂನುಗಳ ಅರಿವು ಪಡೆದರೆ ಮಾತ್ರವೇ ಉತ್ತಮ ಅಪರಾಧ ಮುಕ್ತ ಜೀವನ ನಡೆಸಲು ಸಾಧ್ಯ ಎಂದರು.

ಪುಸ್ತಕ ರೂಪದಲ್ಲಿರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಪೊಲೀಸ್ ಸಿಬ್ಬಂದಿ ಕೆಲಸ ಮಾಡಬೇಕು, ಶಾಲೆಗಳಲ್ಲಿ ಮಕ್ಕಳಿಗೆ ಅರಿವು ನೀಡುವ ಕೆಲಸವಾಗಬೇಕು. ಲಿಂಗ ಪತ್ತೆ ನಿಷೇಧ ಕಾಯಿದೆ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ತಂಬಾಕು ಉತ್ಪನ್ನಗಳ ಕಾನೂನುಗಳ ಕುರಿತು ಮಾಹಿತಿ ನೀಡಿ, ೧೫೧೦೦ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಬಳಕೆಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಮಾತನಾಡಿ, ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿನದ್ದಾಗಿದೆ, ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಖುಷಿ ಕುಶಾಲಪ್ಪ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಚೈಲ್ಡ್ ರೈಟ್ಸ್ ಟ್ರಸ್ಟ್ನ ಜೆ.ಸತೀಶ್ ಬಾಲ್ಯವಿವಾಹ ಕಾಯಿದೆ ಕುರಿತು ಅರಿವು ಮೂಡಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾಸ್ಪತ್ರೆಯ ಮನೋವೈದ್ಯರಾದ ಡಾ.ವಿಜೇತಾದಾಸ್, ಮಾನಸಿಕ ಆರೋಗ್ಯ ರಕ್ಷಣೆ, ಮಾನಸಿಕ ರೋಗಿಗಳಿಗೆ ಇರುವ ಕಾನೂನುಗಳು, ಅವರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಅವರೊಂದಿಗೆ ನಮ್ಮ ವರ್ತನೆ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ ಮತ್ತಿತರರು ಉಪಸ್ಥಿತರಿದ್ದು, ೬೦೦ಕ್ಕೂ ಹೆಚ್ಚು ಮಂದಿ ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಬೀಟ್ ಪೊಲೀಸರು ಭಾಗವಹಿಸಿದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೨ ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಪೊಲೀಸ್ ಸಿಬ್ಬಂದಿಗಾಗಿ ನಡೆದ ಒಂದು ದಿನದ ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯಿದೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಸಂರಕ್ಷಣಾ ಕಾನೂನುಗಳ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ಉದ್ಘಾಟಿಸಿದರು.