ನ್ಯೂಸ್

ಆರ್‌ಟಿಇ ಶುಲ್ಕ ಮರುಪಾವತಿ 137 ಕೋಟಿ ರೂ.ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ಸರ್ಕಾರವು 2020-21ನೇ ಸಾಲಿನ ಬಜೆಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ನಿಗದಿ ಮಾಡಿರುವ ಅನುದಾನದಲ್ಲಿ 137 ಕೋಟಿ ರೂ.ಗಳನ್ನು ಆರ್‌ಟಿಇ ಮರುಪಾವತಿ ಶುಲ್ಕವಾಗಿ ಬಿಡುಗಡೆ ಮಾಡಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆರ್‌ಟಿಇ ಶುಲ್ಕವಾಗಿ ಬಿಡುಗಡೆ ಮಾಡಲು 550 ಕೋಟಿ ರೂ.ಗಳನ್ನು ಘೋಷಿಸಿತ್ತು. ಈ ಪೈಕಿ ಈಗಾಗಲೇ 275 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಎರಡನೇ ಕಂತಿನಲ್ಲಿ 137 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಖಾಸಗಿ ಶಾಲೆಗಳ ಶಿಕ್ಷಕರ ವೇತನ ಪಾವತಿಸುವ ಅಗತ್ಯ ಇರುವುದರಿಂದ ಆರ್‌ಟಿಇ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅನುದಾನ ಬಿಡುಗಡೆ ಮಾಡಿರುವುದಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.