ನ್ಯೂಸ್

ಆರ್‌ಆರ್ ನಗರದಲ್ಲಿ ಸೂಕ್ತ ಬಂದೋಬಸ್ತ್

ಬೆಂಗಳೂರು:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಯಲು ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಈವರೆಗೆ ಪ್ರಚಾರ ಕಾರ್ಯ ಶಾಂತಿಯುತವಾಗಿ ನಡಯುತ್ತಿದೆ. ಸಣ್ಣ ಪುಟ್ಟ ಅಹಿತಕರ ಘಟನೆ ನಡೆದಿದೆ. ಅದನ್ನು ಪೊಲೀಸರು ಪರಿಹರಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ರಾಜಕಾರಣಿಗಳು, ಸೆಲೆಬ್ರಿಟಿ ಗಳು ಪ್ರಚಾರ ನಡೆಸಿದ್ದಾರೆ. ಅನುಮತಿ ಕೊಡುವಾಗ ಕರೊನಾ ನಿಯಮ ಪಾಲಿಸಿ ಎಂದಿದ್ದೇವೆ. ನಿಯಮ ಉಲ್ಲಂಸಿದ ಹಿನ್ನೆಲೆಯಲ್ಲಿ ಶುಕ್ರವಾರ 5 ಪ್ರಕರಣ ದಾಖಲಾಗಿದೆ. ಚುನಾವಣಾ ರ‌್ಯಾಲಿ ಆಯೋಜಕರ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರವು ಪಶ್ಟಿಮ ವಿಭಾಗದ 5 ಹಾಗೂ ಉತ್ತರ ವಿಭಾಗದ 8 ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಪೊಲೀಸರು ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿನ ಮತದಾರರು, ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು, ಪಕ್ಷಗಳ ಕಾರ್ಯಕರ್ತರ ರಕ್ಷಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಶಾಂತಿಯುತ ಮತದಾನ ನಡೆಸಲು ಸೂಕ್ತ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.