ವಿಜಯವಾಣಿ ಸುದ್ದಿಜಾಲ ಕೋಲಾರ
ಸತತ ೧೮ ವರ್ಷಗಳಿಂದ ರಾಯಲ್ ಚಾಲೆಂಜ್ ಬೆಂಗಳೂರು ತಂಡ ಐ.ಪಿ.ಎಲ್. ಕ್ರಿಕೆಟ್ ಆಡುತ್ತಿದ್ದು, ಇದೇ ಪ್ರಥಮ ಬಾರಿಗೆ ಕಪ್ಪನ್ನು ತನ್ನದಾಗಿಸಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಹಿ ಹಂಚಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಆಚರಣೆ ಮಾಡಿದರು.
ಐ.ಪಿ.ಎಲ್. ಪಂದ್ಯ ರಾತ್ರಿ ೧೧.೩೦ಕ್ಕೆ ಮುಕ್ತಾಯ ಆಗುತ್ತಿದ್ದಂತೆ ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮ ಆಚರಣೆಯಲ್ಲಿ ತೊಡಗಿದ್ದು ಕಂಡು ಬಂದಿತು.
ಕೋಲಾರ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಜನನಿಬಿಡ ರಸ್ತೆಗಳಲ್ಲಿ ಬೃಹತ್ತಾಕಾರದ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಪಂದ್ಯಾವಳಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಪಂದ್ಯ ಮುಗಿಯುತ್ತಿದ್ದಂತೆ ಸಿಹಿ ಹಂಚಲು ಮತ್ತು ಪಟಾಕಿ ಸಿಡಿಸಲು ಅಂಗಡಿಗಳಿಗೆ ಅಭಿಮಾನಿಗಳು ಮುಗಿಬಿದ್ದು, ಸಹಿ ಮತ್ತು ಪಟಾಕಿ ಖರೀದಿಸಿದರು.
ಗೆಲುವಿನ ಸೂಚನೆ ಕಂಡು ಬರುತ್ತಿದ್ದಂತೆ ಪಟಾಕಿ ಅಂಗಡಿಗಳವರು ಮತ್ತು ಬೇಕರಿ ಹಾಗೂ ಸಹಿ ಅಂಗಡಿಗಳವರು ಅಂಗಡಿಗಳನ್ನು ತೆರೆದು ಗ್ರಾಹಕರಿಗಾಗಿ ಕಾಯತೊಡಗಿದರು. ಆರ್.ಸಿ.ಬಿ.ಗೆ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಣೆಗಳನ್ನು ನಡೆಸಿದರು.
ಪಂದ್ಯ ಪ್ರಾರಂಭಕ್ಕೂ ಮುನ್ನವೇ ಇನ್ನು ಕೆಲವರು ಕ್ರಿಕೆಟ್ ಆಟಗಾರರು ವಿರಾಟ್ ಕೋಹ್ಲಿಯವರ ಭಾವಚಿತ್ರಗಳನ್ನಿಟ್ಟು ಆರ್.ಸಿ.ಬಿ. ಗೆಲ್ಲಬೇಕೆಂದು ಹಾಲಿನ ಅಭಿಷೇಕ ನಡೆಸಿದ್ದು ಕಂಡುಬAದಿತು. ಆರ್.ಸಿ.ಬಿ. ತಂಡ ಧರಿಸಿದ್ದ ಟೀಶರ್ಟ್ಗಳನ್ನು ಕ್ರಿಕೆಟ್ ಅಭಿಮಾನಿಗಳು ತೊಟ್ಟು ಎಲ್.ಇ.ಡಿ. ಪರದೆಗಳ ಮುಂಭಾಗ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡಿದರು.
ಕೋಲಾರ ನಗರದ ಡ್ಯೂಂಲೈಟ್ ವೃತ್ತ, ಎಂ.ಜಿ.ರಸ್ತೆಯ ಚಂಪಕ್ ವೃತ್ತ, ಹೊಸ ಬಸ್‌ಸ್ಟಾಂಡ್ ಬಳಿ ಹಾಗೂ ದೊಡ್ಡ ದೊಡ್ಡ ಹೋಟೆಲ್ ಮುಂಭಾಗ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡಲು ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಅಭಿಮಾನಿಗಳಿಗೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಸ್ವೀಟ್ ಅಂಗಡಿಗಳಲ್ಲಿ ವ್ಯಾಪಾರ ಜೋರು :
ಗೆಲುವು ಸೂಚನೆ ಆಗುತ್ತಿದ್ದಂತೆ ನಗರ ಪ್ರದೇಶಗಳಲ್ಲಿ ಯುವಕರ ತಂಡ ಸ್ವೀಟ್ ಅಂಗಡಿಗಳತ್ತ ನುಗ್ಗಿ ಸ್ವೀಟನ್ನು ಖರೀದಿಸಿದರು. ಇನ್ನು ಕೆಲವರು ಬೇಕರಿಗಳ ಬಾಗಿಲು ತೆಗೆಯಿಸಿ ಸ್ವೀಟ್ ಮತ್ತು ಕೇಕ್‌ನ್ನು ಖರೀದಿಸಿ ಸಂಭ್ರಮದಲ್ಲಿ ತೊಡಗಿದರು.
ಪಟಾಕಿ ಅಂಗಡಿಗಳಲ್ಲಿ ಡಿಮ್ಯಾಂಡ್ :
ನಗರದಲ್ಲಿ ಇದ್ದ ಪಟಾಕಿ ಅಂಗಡಿಗಳಲ್ಲಿ ಪಟಾಕಿಗಳನ್ನು ಖರೀದಿಸಲು ಅಂಗಡಿಗಳ ಮುಂಭಾಗ ಯುವಕರು ಸರದಿ ಸಾಲಿನಲ್ಲಿ ನಿಲ್ಲುವಂತೆ ಆಗಿತ್ತು. ಇದ್ದ ಪಟಾಕಿಗಳನ್ನು ಅಂಗಡಿಗಳಲ್ಲಿ ಖಾಲಿ ಮಾಡಿ ಕೆಲವರಿಗೆ ಪಟಾಕಿ ಸಿಗದೆ ಪರದಾಡುವಂತೆ ಆಯಿತು.
ಕುಣಿದು ಕುಪ್ಪಳಿಸಿದ ಶಾಸಕ ನಂಜೇಗೌಡ :
ಆರ್.ಸಿ.ಬಿ.ತಂಡ ಗೆಲುವು ಸಾಧಿಸುತ್ತಿದ್ದಂತೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದರು. ಮಗ ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ನಂಜೇಗೌಡ ಮಾಲೂರು ಪಟ್ಟಣದಲ್ಲಿ ಹೋಂಡಾ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಬೃಹತ್ ಎಲ್.ಇ.ಡಿ.ಪರದೆಗಳನ್ನು ಅಳವಡಿಸಿದ್ದರು.
ಶಾಸಕ ನಂಜೇಗೌಡ ಕ್ರಿಕೆಟ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ೧೮ ವರ್ಷಗಳ ನಂತರ ಆರ್.ಸಿ.ಬಿ. ತಂಡ ಕಪ್ಪನ್ನು ತನ್ನದಾಗಿಸಿಕೊಂಡಿರುವುದು ಕರ್ನಾಟಕಕ್ಕೆ ಸಿಕ್ಕದ ಜಯವಾಗಿದೆ ಎಂದು ಅಭಿಮಾನಿಗಳತ್ತ ಕೈಬೀಸಿ ಕುಣಿತಕ್ಕೆ ಹೆಜ್ಜೆ ಹಾಕಿದರು.
ಚಿತ್ರ ೦೪ ಕೆ.ಎಲ್.ಆರ್. ೦೧ : ಮಾಲೂರಿನಲ್ಲಿ ಹೊಂಡಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದ ಶಾಸಕ ಕೆ.ವೈ.ನಂಜೇಗೌಡ